ಬೆಂಗಳೂರು: ಐಎಂಎ ಕಂಪನಿ ವಂಚನೆ ಪ್ರಕರಣ ಸಂಬಂಧ 33,500 ದೂರುಗಳು ದಾಖಲಾಗಿದ್ದು, ಇಂದು ಹೊರ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಹಲವೆಡೆಗಳಿಂದ ಆಗಮಿಸಿದ ಜನರು ಶಿವಾಜಿನಗರದ ಗಣೇಶ್ ಭಾಗ್ ಸಭಾಂಗಣದಲ್ಲಿ ದೂರು ಕೊಡುತ್ತಿದ್ದ ದೃಶ್ಯ ಕಂಡು ಬಂತು.
ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಡವರು, ಮಧ್ಯಮ ವರ್ಗ, ಸರ್ಕಾರಿ ಅಧಿಕಾರಿಗಳಷ್ಟೇ ವಂಚನೆಗೊಳಗಾಗಿಲ್ಲ. ಸಂಸ್ಥೆಯಲ್ಲೇ ಕೆಲಸ ಮಾಡ್ತಿದ್ದ ಉದ್ಯೋಗಿಗಳಿಗೂ ಮನ್ಸೂರ್ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಜುವೆಲ್ಸ್ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದ 200 ಮಂದಿ, ಪೂರ್ವ ವಿಭಾಗ ಪೊಲೀಸರನ್ನು ಭೇಟಿ ಮಾಡಿ ತಾವೂ ಕೂಡ ಸುಮಾರು 2 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿರುವ ವಿಚಾರ ತಿಳಿಸಿದ್ದಾರೆ. ಐಎಮ್ಎ ಉದ್ಯೋಗಿಗಳಿಗೆ ಮನ್ಸೂರ್ ಬ್ರೈನ್ ವಾಷ್ ಮಾಡಿ, ಸಾರ್ವಜನಿಕರಿಗೆ ನಂಬಿಕೆ ಇದೆ, ನಿಮಗೆ ಇಲ್ವಾ? ನಿಮ್ಮ ಹಣ ಇಲ್ಲಿ ಹೂಡಿಕೆ ಮಾಡಿ ಎಂದು ಹೇಳುತ್ತಿದ್ದರಂತೆ. ಇದನ್ನು ನಂಬಿದ ಐಎಂಎ ಕಂಪೆನಿ ಉದ್ಯೋಗಿಗಳು ಲಕ್ಷಗಟ್ಟಲೆ ಹಣ ಹೂಡಿಕೆ ಮಾಡಿದ್ದಾರೆ.
ಮತ್ತೊಂದೆಡೆ ಆರೋಪಿ ಮನ್ಸೂರ್ ಆಸ್ತಿಯನ್ನು ಎಸ್ಐಟಿ ಶೋಧ ಮಾಡುತ್ತಿದ್ದು, ಸಬ್ರಿಜಿಸ್ಟರ್ ಕಚೇರಿಗಳಿಗೆ ಎಸ್ಐಟಿ ಪತ್ರ ಬರೆದಿದೆ. ಪತ್ರದಲ್ಲಿ ಬೆಂಗಳೂರಿನ ಮನ್ಸೂರ್ ಆಸ್ತಿ ವಿವರ ನೀಡುವಂತೆ ಕೇಳಿದ್ದಾರೆ. ಹಾಗೆಯೇ ಕೆಪಿಐಡಿ (ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆ) ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪನಿ ಮಾಲೀಕನ ಸ್ಥಿರ ಹಾಗೂ ಚರ ಆಸ್ತಿಗಳ ಮುಟ್ಟುಗೋಲಿಗೆ ತಯಾರಿ ನಡೆದಿದ್ದು, ಈಗಾಗಲೇ ಮನ್ಸೂರ್ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಂಪನಿ ಮಾಲೀಕ ಮನ್ಸೂರ್ ನಾಪತ್ತೆಯಾಗಿರುವ ಕಾರಣ ಆತನಿಗೆ ಸೇರಿದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಸದ್ಯದಲ್ಲೇ ನ್ಯಾಯಾಲಯದ ಅನುಮತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.