ಬೆಂಗಳೂರು: ಮಾಜಿ ಪ್ರೇಯಸಿಯ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ "ಯಾರು ಮಾದಕ ಪದಾರ್ಥ ಸೇವಿಸುತ್ತಿದ್ದರು ಎಂಬುದನ್ನು ತಿಳಿದುಕೊಳ್ಳಲು ವೈದ್ಯಕೀಯ ಪರೀಕ್ಷೆ ನಡೆಯಲಿ. ನಾನು ಈ ಸವಾಲು ಸ್ವೀಕರಿಸಲು ಸಿದ್ಧನಿದ್ದೇನೆ" ಎಂದಿದ್ದಾರೆ.
ತಮ್ಮ ವಿರುದ್ಧದ ಗಂಭೀರ ಆರೋಪಗಳ ಕುರಿತು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿರುವ ಅವರು, "ಅವರು ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಮಾದಕ ಪದಾರ್ಥ ಸೇವಿಸುತ್ತಿದ್ದೆ ಎಂದು ಹೇಳಿದ್ದಾರೆ. ಇವೆಲ್ಲವೂ ಸಹ ನನ್ನ ಕ್ರಿಕೆಟ್ ಜೀವನವನ್ನು ಅಂತ್ಯಗೊಳಿಸುವ ಯತ್ನ" ಎಂದು ಹೇಳಿದರು.
"ಅಹಮದಾಬಾದಿಗೆ ಬಂದಿದ್ದಾಗ ಅವರು ನನ್ನ ರೂಮಿಗೆ ಮಾದಕ ವಸ್ತುಗಳನ್ನು ತರಿಸಿಕೊಂಡು ಸೇವಿಸಿದ್ದಾರೆ. ಆ ಸಂದರ್ಭದಲ್ಲಿ ನಾನು ಎಷ್ಟೇ ಹೇಳಿದರೂ ಸಹ ಕೇಳದೆ, ನನ್ನ ಕ್ರಿಕೆಟ್ ಜೀವನ ಅಂತ್ಯ ಮಾಡುವುದಾಗಿಯೂ, ನನ್ನ ಹೆಸರು ಹಾಳು ಮಾಡುವುದಾಗಿಯೂ ಮಾದಕ ಸೇವನೆ ಮುಂದುವರೆಸಿದ್ದರು. ಓರ್ವ ಕ್ರೀಡಾಪಟುವಾಗಿ ನಾನು ಮಾದಕ ವಸ್ತುಗಳ ಸೇವನೆಯ ವಿರೋಧಿ. ಆದ್ದರಿಂದ ಆ ಸಂದರ್ಭದಲ್ಲಿ ನನ್ನ ರಕ್ಷಣೆಗಾಗಿ ಈ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಅದನ್ನು ಪೊಲೀಸರಿಗೂ ನೀಡುತ್ತಿದ್ದೇನೆ. ಅದಷ್ಟೇ ಅಲ್ಲದೇ, ಬೇರೆಯವರ ಜೊತೆ ಹೋಟೆಲ್‌ಗಳಲ್ಲಿ ಮಾದಕ ಸೇವನೆ ಮಾಡುತ್ತಿರುವ ವಿಡಿಯೋಗಳೂ ಸಹ ನನಗೆ ದೊರೆತಿದ್ದು, ಅವುಗಳನ್ನೂ ಪೊಲೀಸರಿಗೆ ನೀಡುತ್ತೇನೆ. ಈ ವಿಚಾರದಲ್ಲಿ ಸುಳ್ಳು ಆರೋಪಗಳ ಮೂಲಕ ನನಗೆ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾರೆ. ನನಗೆ ನ್ಯಾಯ ಬೇಕಿದೆ, ಆದ್ದರಿಂದ ಅಗತ್ಯ ದಾಖಲೆಗಳನ್ನು ನೀಡುತ್ತಿದ್ದೇನೆ" ಎಂದಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರೇಯಸಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕೆ ಸಿ ಕಾರಿಯಪ್ಪ; ಪ್ರತಿ ದೂರು ನೀಡಿದ ಮಾಜಿ ಪ್ರೇಯಸಿ
ಕೆ.ಸಿ.ಕಾರಿಯಪ್ಪ ಬಗಲಗುಂಟೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಈ ಹಿಂದೆ ನಾನು ಅವರೊಂದಿಗೆ ಸಂಬಂಧದಲ್ಲಿದ್ದೆ. ನಂತರ ದೂರವಾಗಿದ್ದು, ಇದೀಗ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಇನ್ನೊಂದೆಡೆ, ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಮಾಜಿ ಪ್ರೇಯಸಿ ಕೂಡ ಕೆ.ಸಿ.ಕಾರಿಯಪ್ಪ ವಿರುದ್ಧ ಪ್ರತಿ ದೂರು ಸಲ್ಲಿಸಿದ್ದಾರೆ.
ಪ್ರತಿ ದೂರಿನಲ್ಲಿ, "ನಾನು ಮತ್ತು ಕಾರಿಯಪ್ಪ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದೆವು. ಇಬ್ಬರು ಒಂದೇ ಸಮುದಾಯದವರು. ಸಂಬಂಧದಲ್ಲಿದ್ದಾಗ ಇಬ್ಬರ ನಡುವೆ ಪರಸ್ಪರ ಸಮ್ಮತಿಯ ಮೇರೆಗೆ ದೈಹಿಕ ಸಂಪರ್ಕ ಬೆಳೆದು ನಾನು ಗರ್ಭ ಧರಿಸಿದ್ದೆ. ಅವರು ಬಲವಂತವಾಗಿ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದರು. ಅಲ್ಲದೇ ನನ್ನಿಂದ ಹಂತ ಹಂತವಾಗಿ 2 ಲಕ್ಷ ರೂ. ಹಣ ಪಡೆದುಕೊಂಡರು. ನಂತರದಲ್ಲಿ ಅವರ ಪೋಷಕರು "ನೀನು ವಿಚ್ಛೇದಿತೆ. ನಮ್ಮ ಮಗನನ್ನು ಮದುವೆಯಾಗಬೇಡ" ಎಂದು ಅವಾಚ್ಯವಾಗಿ ನಿಂದಿಸಿದರು. ಡಿಸೆಂಬರ್ 18ರಂದು ದಿಣ್ಣೂರು ಮುಖ್ಯರಸ್ತೆಯಲ್ಲಿರುವ ನಮ್ಮ ಮನೆಗೆ ಬಂದಿದ್ದ ಕಾರಿಯಪ್ಪ "ನೀನು ಈಗಾಗಲೇ ಡಿವೋರ್ಸ್ ಆದವಳು. ನಿನ್ನನ್ನು ಕಂಡರೆ ನನಗಿಷ್ಟವಿಲ್ಲ. ನಿನ್ನಿಂದ ನಾನು ಯಾವುದೇ ಹಣ ಪಡೆದಿಲ್ಲ" ಎಂದು ನನ್ನ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ" ಎಂದು ಉಲ್ಲೇಖಿಸಿದ್ದಾರೆ.
ಇದೀಗ ಎರಡು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಚರಂಡಿಯಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆ