ಬೆಂಗಳೂರು: ದುಬಾರಿ ದರಕ್ಕೆ ಸೋಲಾರ್ ವಿದ್ಯುತ್ ಖರೀದಿ ಅಕ್ರಮವನ್ನು ಸಿಬಿಐ ತನಿಖೆಗೆ ನೀಡಿದರೆ ಸತ್ಯ ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಹಿಂದಿನ ಕಾಂಗ್ರೆಸ್ ಅವಧಿಯಲ್ಲಿ ಡಿಕೆಶಿ ಇಂಧನ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಪ್ರಸ್ತಾಪಿಸಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ಮಾತನಾಡುತ್ತ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿ ಕೆ ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ನಡೆದ ದುಬಾರಿ ದರಕ್ಕೆ ಸೋಲಾರ್ ವಿದ್ಯುತ್ ಖರೀದಿ ಪ್ರಕರಣವನ್ನು ಪ್ರಸ್ತಾಪಿಸಿದರು. ಇದರಲ್ಲಿ ಏನೇನಾಗಿದೆ ಅಂತ ಸತ್ಯ ಗೊತ್ತಾಗಲು ಸಿಬಿಐ ತನಿಖೆಗೆ ಕೊಟ್ರೆ ತಿಳಿಯುತ್ತದೆ. ಯಾರ ಯಾರ ಹಣೆಬರಹ ಏನೇನಾಗಿದೆ ಅಂತ ಸಿಬಿಐಗೆ ಕೊಟ್ರೆ ಗೊತ್ತಾಗುತ್ತೆ. ಕಡಿಮೆ ದರಕ್ಕೆ ವಿದ್ಯುತ್ ಸಿಕ್ತಿದ್ರೂ ದುಬಾರಿ ದರಕ್ಕೆ ಯಾಕೆ ಹೋದ್ರು, ಅಂತ ಹೇಳಲಿ ಎಂದು ಸವಾಲು ಹಾಕಿದರು.
ಸೋಲಾರ್ ಪಿಪಿಎಸ್ ವಿಚಾರದಲ್ಲಿ ಅಕ್ರಮದ ಆರೋಪ ಮಾಡಿದ ಕುಮಾರಸ್ವಾಮಿ, ಒಂದು ಯೂನಿಟ್ ವಿದ್ಯುತ್ ಗೆ 9.60 ರೂ. ನಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 25 ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಬಗ್ಗೆ ನಮ್ಮ ಡಿಸಿಎಂ ಅವರಿಗೆ ಕೇಳಿದ್ರೆ ಗೊತ್ತಾಗುತ್ತದೆ. ಇದರ ಬಗ್ಗೆ 2018 ರಲ್ಲೂ ನಾನು ಮಾತನಾಡಿದ್ದೆ, ನಂತರ ಸದನ ಸಮಿತಿ ರಚಿಸಲಾಯ್ತು. ಅದರಿಂದ ಏನೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ವರ್ಗಾವಣೆ ವಿಚಾರ: ವಿಧಾನಸಭೆಯಲ್ಲಿಂದು ಗ್ಯಾರಂಟಿಗಳ ವಿರುದ್ಧ ಎಚ್ ಡಿಕೆ ಸಾಫ್ಟ್ ಅಟ್ಯಾಕ್ ಮಾಡುವ ಮೂಲಕ ಗಮನ ಸೆಳೆದರು. ಈ ವೇಳೆ ವರ್ಗಾವಣೆ ದಂಧೆ ವಿಚಾರ ಬಂದ್ರೂ ಪೆನ್‌ಡ್ರೈವ್ ಬಗ್ಗೆ ಹೇಳದೇನೇ ವಿಷಯ ಪ್ರಸ್ತಾಪಿಸಿದರು. ಗ್ಯಾರಂಟಿ ಗೊಂದಲಗಳ ಬಗ್ಗೆ ಮಾತಾಡುವಾಗಲೇ ಇಲಾಖೆಯೊಂದರಲ್ಲಿ ವರ್ಗಾವಣೆ ದಂಧೆ ನಡೀತಿದೆ ಎಂದು ಗಂಭೀರ ಆರೋಪ ಮಾಡಿದರು.
ಚುನಾವಣೆ ವೇಳೆ ಕಾಂಗ್ರೆಸ್ ಬಿಜೆಪಿ ಸರ್ಕಾರದಲ್ಲಿನ ಹುದ್ದೆಗಳಿಗೆ ರೇಟ್ ಕಾರ್ಡ್ ಬಗ್ಗೆ ಜಾಹೀರಾತು ನೀಡಲಾಗಿತ್ತು. ಅದೇ ರೀತಿ ಇಲಾಖೆ ಮತ್ತು ಸಚಿವರ ಹೆಸರೇಳದೇ ಪೋಸ್ಟಿಂಗ್ ಗಳಿಗೆ ನಿರ್ದಿಷ್ಟ ಪರ್ಸೆಂಟೇಜ್ ದರ ಫಿಕ್ಸ್ ಮಾಡಲಾಗಿದೆ ಎಂದು ಆರೋಪ ಮಾಡಿದ್ರು. ಈ ಸಂಬಂಧ ದಾಖಲೆ ಪತ್ರ ತೋರಿಸಿದ ಎಚ್ ಡಿಕೆ ಇದರಲ್ಲಿ ಪರ್ಸೆಂಟೇಜ್ ವಿವರ ಇದೆ, ಸಿಎಂಗೆ ಕಳಿಸಿಕೊಡ್ತೀನಿ ಅಂದ್ರು.
ವಿದ್ಯುತ್ ದರ ಏರಿಕೆಗೂ ಫೋಟೋ ಹಾಕಿಸಿ: ಗೃಹ ಜ್ಯೋತಿ ಹೆಸರಲ್ಲಿ 200 ಯನಿಟ್ ವಿದ್ಯುತ್ ಉಚಿತ ಅಂತ ಸಿಎಂ ಹಾಗೂ ಡಿಸಿಎಂ ಫೋಟೋ ಹಾಕಿದ್ದೀರಿ. ಈಗ ವಿದ್ಯುತ್ ದರ ಏರಿಕೆಯಾಗಿದೆಯಲ್ಲ ಅದಕ್ಕೂ ನಿಮ್ಮ ಫೋಟೋ ಹಾಕಬೇಕಲ್ಲಾ? ಎಂದು ಹೆಚ್ ಡಿಕೆ ಪ್ರಶ್ನಿಸಿದರು.
ನಾನು ನಿಮಗೆ ಸಾಕ್ಷಿ ಕೊಡುತ್ತೇನೆ: ಅದು ದಾಖಲೆ ಇಲ್ಲದೆ ಹೇಳಿದ್ದಲ್ಲ. ಬಿಜೆಪಿ ಪಕ್ಷದವರೇ ಹೇಳಿರುವ ದರ ನಿಗದಿಯನ್ನು ಜಾಹೀರಾತು ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು. ಆಗ ಎದ್ದು ನಿಂತ ಅಶ್ವತ್ಥ್ ನಾರಾಯಣ್ ಸಚಿವರಿಗೆ ಸವಾಲು ಹಾಕಿದರು. ಸಮಾಜ ಕಲ್ಯಾಣ ಇಲಾಖೆಯದ್ದು ಸಾಕ್ಷಿ ಕೊಡ್ತೀನಿ. ಇದೇ ಸದನದಲ್ಲಿ ಕೊಡುತ್ತೇನೆ. ಬಹಳ ದೊಡ್ಡ ಪ್ರಾಮಾಣಿಕ ಅಂತೀರಲ್ಲ. ಹೇಳಪ್ಪಾ. ನಮ್ಮ ಬಗೆಗಿನ ನೇಮಕಾತಿಯ ದರ ನಿಗದಿ ಬಗ್ಗೆ ಸಾಕ್ಷಿ ಕೊಡಿ ಎಂದು ಸವಾಲು ಹಾಕಿದರು.
ಭ್ರಷ್ಟಾಚಾರ ನಿರ್ಮೂಲನೆಗೆ ನಮ್ಮ ಸಂಪೂರ್ಣ ಸಹಕಾರ ಇದೆ. ಈಗಿನ ಚುನಾವಣೆ ವ್ಯವಸ್ಥೆಯಲ್ಲಿ ಯಾವ ಭರವಸೆ ಇಡುವುದು. ಈಗಿನ ವ್ಯವಸ್ಥೆಯಲ್ಲಿ ಗೆದ್ದವನು ಸೋತ, ಸೋತವನು ಸತ್ತ ಅಂದಿದೆ. ಚುನಾವಣೆಯಲ್ಲಿ QR ಕಾರ್ಡ್ ನ ಕೂಪನ್ ಕೊಟ್ಟು, ಐದು ಸಾವಿರ ರೂ. ಗಿಫ್ಟ್ ಕೊಟ್ಟರು. ಇರುವ ಸತ್ಯ ಹೇಳಿದ್ದೇನೆ. ಕಹಿ ಆಗಬಹುದು. ಈ ಸರ್ಕಾರದ ಪ್ರಾಮಾಣಿಕ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ನಾನು ಸಹನೆ ಕಳೆದುಕೊಂಡಿಲ್ಲ. ಮೈ ಪರಿಚಿಕೊಳ್ಳುತ್ತಲೂ ಇಲ್ಲ. ನನಗೆ ಅಸೂಯೆ, ಅಧಿಕಾರ ಕಳಕೊಂಡ ಅಸಹನೆ ಇಲ್ಲ. ಇದೆಲ್ಲಾ ನೋಡಾಗಿದೆ. ಒಂದೂವರೆ ತಿಂಗಳಲ್ಲಿ ಮಾತನಾಡುವುದನ್ನು ಹೇಳಿದ್ದೇನೆ. ಸರಿ ಪಡಿಸಿಕೊಳ್ಳಿ. ಇಲ್ಲವಾದರೆ ರಾಜ್ಯದ ಜನರು ಪಾಠ ಕಲಿಸುತ್ತಾರೆ ಎಂದು ಎಚ್ಡಿಕೆ ಎಚ್ಚರಿಕೆ ನೀಡಿದರು.
ಇದನ್ನೂಓದಿ:ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ನುಡಿದಂತೆ ನಡೆದಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ