ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಗ್ಯಾಂಗ್ ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.
ಜ.16ರಂದು ಪ್ರೇಜರ್ ಟೌನ್ ರಸ್ತೆಯಲ್ಲಿ ಸೂಪಿಯಾನ್ ಎನ್ನುವ ಯುವಕನ ಮೇಲೆ ನಾಲ್ಕೈದು ಜನರುಳ್ಳ ಗ್ಯಾಂಗ್ವೊಂದು ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿತ್ತು. ಅದೃಷ್ಟವಶಾತ್ ಹಲ್ಲೆಗೊಳಗಾದ ಯುವಕ ಆಸ್ಪತ್ರೆಯಲ್ಲಿ ಜೀವನ್ಮರಣ ಮಧ್ಯೆ ಹೋರಾಡುತ್ತಿದ್ದಾನೆ.
ಹೀಗೆ ಹಲ್ಲೆ ನಡೆಸಿದ್ದ ಗ್ಯಾಂಗ್ ಹಿಂದೆ ಬಿದ್ದ ಪುಲಕೇಶಿನಗರ ಪೊಲೀಸರು ಮೊದಲು ಅಕ್ಬರ್ ಎನ್ನುವ ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಸಿದಾಗ ಅದೇ ದಿನದಂದು ಮತಿನ್ ಎಂಬುವವನನ್ನ ಅಪಹರಿಸಿ ಬಾಗಲೂರು ಬಳಿ ಕೊಲೆ ಮಾಡಿರುವ ವಿಚಾರ ಬಾಯ್ಬಿಬಿಟ್ಟಿದ್ದನು. ಈ ಪ್ರಕರಣದ ತನಿಖೆ ಕೈಗೊಂಡ ಪೂರ್ವ ವಿಭಾಗ ಪೊಲೀಸರು, ಖಚಿತ ಮಾಹಿತಿ ಪಡೆದು ಇಂದು ಕಲ್ಲಪಳ್ಳಿ ಸ್ಮಶಾನದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ, ಆರೋಪಿಗಳು ಪೊಲೀಸರು ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದರಿಂದ ರಿಜ್ವಾನ್ ಹಾಗೂ ಪರ್ವೆಜ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಆರೋಪಿ ರಿಜ್ವಾನ್ ವಿಚಾರಣೆಗೆ ಒಳಪಡಿಸಿದಾಗ ಕೊಲೆಯಾದ ಮತಿನ್ ಆರೋಪಿ ರಿಜ್ವಾನ್ ಅತ್ತಿಗೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಇದರಿಂದ ಕುಪಿತಗೊಂಡ ರಿಜ್ವಾನ್ ಗ್ಯಾಂಗ್ ಕಟ್ಟಿಕೊಂಡು ಮತಿನ್ನನ್ನು ಕೊಲೆ ಮಾಡಿರುವ ವಿಚಾರ ಬಾಯಿ ಬಿಟ್ಟಿದ್ದಾನೆ. ಇದೇ ವಿಚಾರಕ್ಕೆ ಸೂಪಿಯಾನ್ ಮೇಲೂ ಕೂಡ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣ ಸಂಬಂಧ ಈತನಿಗೆ ಸಹಕರಿಸಿದ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.