ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತರಿಂದ ಬಂಧನಕ್ಕೊಳಗಾಗಿರುವ ಕೆ.ಆರ್. ಪುರ ತಹಶೀಲ್ದಾರ್ ಹಾಗೂ ಕೆಎಎಸ್ ಅಧಿಕಾರಿ ಅಜಿತ್ ರೈ ಅವರನ್ನು 7 ದಿನಗಳ ಕಾಲ ಲೋಕಾಯುಕ್ತರ ವಶಕ್ಕೆ ನೀಡಿ ನಗರದ 78ನೇ ಸಿಸಿಹೆಚ್ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.
ಜೂನ್ 28ರಂದು ಅಜಿತ್ ರೈಗೆ ಸೇರಿದ ಮನೆ ಹಾಗೂ ಕಚೇರಿ ಸೇರಿದಂತೆ 10 ಕಡೆಗಳಲ್ಲಿ ದಾಳಿ ನಡೆಸಿ ರಾತ್ರಿಯವರೆಗೂ ಪರಿಶೀಲನೆ ಮುಂದುವರೆಸಿದ್ದ ಲೋಕಾಯುಕ್ತ ಪೊಲೀಸರು, ಗುರುವಾರ ಬೆಳಗ್ಗೆ ಅವರನ್ನು ವಶಕ್ಕೆ ಪಡೆದಿದ್ದರು. ಇಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ತನಿಖೆಯ ಭಾಗವಾಗಿ ಪುತ್ತೂರಿಗೆ ಕರೆದೊಯ್ಯುವ ಅಗತ್ಯವಿರುವುದರಿಂದ 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ, ಜುಲೈ 6ರ ವರೆಗೆ ಅಜಿತ್ ರೈ ಅವರನ್ನು ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿತು.
ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ.. ದಾಖಲೆಗಳ ಪರಿಶೀಲನೆ
ಲೋಕಾಯುಕ್ತ ನಗರ ವಿಭಾಗದ ಎಸ್ಪಿ ಅಶೋಕ್ ಕೆ.ವಿ ನೇತೃತ್ವದ ತಂಡ ಅಜಿತ್ ರೈಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಬೆಂಗಳೂರಿನ ಸಹಕಾರ ನಗರ, ರಾಮಮೂರ್ತಿ ನಗರದಲ್ಲಿರುವ ನಿವಾಸಗಳು ಹಾಗೂ ಕಚೇರಿಗಳ ಮೇಲೆ ಶೋಧ ನಡೆಸಲಾಗಿತ್ತು. ಈ ವೇಳೆ ರೈ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿತ್ತು.
ಈ ಹಿಂದೆ ಕೆ.ಆರ್.ಪುರದ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಜಿತ್, ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ ಹೈಕೋರ್ಟ್ನಿಂದ ತಡೆಯಾಜ್ಞೆ ತರಲು ನೆರವು ನೀಡಿದ್ದರು ಎಂಬ ಆರೋಪದಡಿ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಕೆಲವು ದಿನಗಳ ಹಿಂದೆ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದ್ದರಿಂದ ಮತ್ತೆ ಕೆ.ಆರ್.ಪುರ ತಹಶೀಲ್ದಾರ್ ಆಗಿ ಬಂದಿದ್ದರು. ಕಳೆದ ಒಂದು ವಾರದ ಹಿಂದಷ್ಟೇ ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿತ್ತು.
ಇದನ್ನೂ ಓದಿ: ವಿಜಯಪುರದಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರು ನಗರ, ಬಾಗಲಕೋಟೆ, ಬೀಳಗಿ, ಕಲಬುರಗಿ, ತುಮಕೂರು, ಕೊಡಗು, ವಿಜಯಪುರ, ರಾಯಚೂರು ಸೇರಿದಂತೆ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು, ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಗಲಕೋಟೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮನೆ ಮೇಲೆ ನಡೆದ ದಾಳಿ ನಡೆದಿದ್ದು ಎರಡು ನಕ್ಷತ್ರ ಆಮೆಗಳು ಪತ್ತೆಯಾಗಿದ್ದವು. ಅಜಿತ್ ರೈ ಅವರ ಮನೆಯಲ್ಲಿ ವಿದೇಶಿ ಲಿಕ್ಕರ್ ಬಾಟಲ್ ಸಿಕ್ಕಿತ್ತು.
ಇದನ್ನೂ ಓದಿ: ತಹಶೀಲ್ದಾರ್ ಅಜಿತ್ ರೈ ಸಹೋದರ ಸೇರಿ ನಾಲ್ವರು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರಿಂದ ನೋಟಿಸ್