ಬೆಂಗಳೂರು: ರಾಜ್ಯದಲ್ಲಿ ಕಂದಾಯ ಭೂಮಿಯಲ್ಲಿ ಬಡವರು ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸುವ ಕಾಲ ಸನ್ನಿಹಿತವಾಗಿದೆ. ಅದೇ ರೀತಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ನೀಡುತ್ತಿರುವ ಪರಿಹಾರದ ಮೊತ್ತವನ್ನು ಮೂರು ಪಟ್ಟು ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಸುಮಾರು ಹನ್ನೆರಡು ಲಕ್ಷ ಮಂದಿ ಕಂದಾಯ ಭೂಮಿಯಲ್ಲಿ ಆಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದು ಇದನ್ನು ಸಕ್ರಮಗೊಳಿಸುವ ಸಂಬಂಧ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವುಗೊಳ್ಳುವ ಸೂಚನೆಗಳಿವೆ ಎಂದರು.
ಬೆಂಗಳೂರು ಒಂದರಲ್ಲಿಯೇ ಇಂತಹ ಐದು ಲಕ್ಷ ಆಕ್ರಮ ಮನೆಗಳಿದ್ದು, ಉಳಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಏಳು ಲಕ್ಷದಷ್ಟು ಆಕ್ರಮ ಮನೆಗಳಿವೆ. 40×60 ಅಳತೆಯವರೆಗಿನ ನಿವೇಶನಗಳಲ್ಲಿ ಕಟ್ಟಿರುವ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ ಬಯಸಿದೆ. ಉಳಿದಂತೆ, ವಾಣಿಜ್ಯ ಉದ್ದೇಶಕ್ಕಾಗಿ ಆಕ್ರಮವಾಗಿ ಕಟ್ಟಿಕೊಂಡಿರುವ ಕಟ್ಟಡಗಳನ್ನು ಸಕ್ರಮಗೊಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಂಡ ಕೂಡಲೇ ಆಕ್ರಮ ಮನೆಗಳನ್ನು ಸಕ್ರಮಗೊಳಿಸುವ ಸಂಬಂಧ ಹೊಸತಾಗಿ ಅರ್ಜಿಗಳನ್ನು ಹಾಕಲು ಜನರಿಗೆ ಅವಕಾಶವಿದ್ದು, ನಿಗದಿತ ದಂಡ ಶುಲ್ಕದೊಂದಿಗೆ ಮನೆಗಳನ್ನು ಸಕ್ರಮಗೊಳಿಸಿಕೊಳ್ಳಬಹುದು ಎಂದ ಅವರು, ಈ ಕಾರ್ಯದ ಮೂಲಕ ಸರ್ಕಾರದ ಬೊಕ್ಕಸಕ್ಕೆ 20 ಸಾವಿರ ಕೋಟಿ ರೂಪಾಯಿ ಸಿಗಲಿದೆ ಎಂದರು.
ಪ್ರಕೃತಿ ವಿಕೋಪ ಪರಿಹಾರ ಹೆಚ್ಚಳ: ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡುವ ಎನ್.ಡಿ.ಆರ್.ಎಫ್ ನಿಧಿಯ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಳ ಮಾಡಲು ಮನವಿ ನೀಡುವುದಾಗಿ ಸಚಿವರು ತಿಳಿಸಿದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ಪರಿಹಾರದ ಪ್ರಮಾಣ ಹಲವು ಕಾಲದಿಂದ ಹೆಚ್ಚಳವಾಗಿಲ್ಲ ಎಂದ ಅವರು, ಈ ನಿಧಿಯಡಿ ರಾಜ್ಯಕ್ಕೆ ಬರುತ್ತಿರುವ ಹಣ ಸಾಲುತ್ತಿಲ್ಲ.
ಮನೆಗಳು ಹಾಳಾದರೆ ಕೇಂದ್ರ ಸರ್ಕಾರ 95 ಸಾವಿರ ರೂ. ನೀಡುತ್ತದೆ. ಆದರೆ ಇದು ಸಾಲುವುದಿಲ್ಲ ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರ ನಾಲ್ಕು ಲಕ್ಷದ ಐದು ಸಾವಿರ ರೂಪಾಯಿಗಳನ್ನು ಸೇರಿಸಿ ಐದು ಲಕ್ಷ ರೂಪಾಯಿ ನೀಡುತ್ತಿದೆ. ಕೇಂದ್ರ ಸರ್ಕಾರ ಈ ಪರಿಹಾರದ ಮೊತ್ತವನ್ನು ಮೂರು ಪಟ್ಟು ಹೆಚ್ಚಳ ಮಾಡಿದರೆ 2.85 ಲಕ್ಷ ರೂಪಾಯಿ ಬರುತ್ತದೆ.ಇದರಿಂದ ಫಲಾನುಭವಿಗಳಿಗೂ ಅನುಕೂಲವಾಗುತ್ತದೆ. ರಾಜ್ಯ ಸರ್ಕಾರದ ಬೊಕ್ಕಸದ ಮೇಲೂ ಹೊರೆ ಕಡಿಮೆಯಾಗುತ್ತದೆ ಎಂದು ನುಡಿದರು.
ಬೆಳಹಾನಿಯಾದಾಗ ವಿವಿಧ ಬೆಳೆಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ನೀಡುವ ಪರಿಹಾರದ ಪ್ರಮಾಣ ಕಡಿಮೆ ಎಂದ ಅವರು ಒಂದು ಹೆಕ್ಟೇರ್ ರಾಗಿ ಬೆಳೆಗೆ ಹದಿನಾರು ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತದೆ. ಇದೇ ರೀತಿ ವಿವಿದ ಬೆಳೆಗಳಿಗೆ ಪರಿಹಾರದ ಮೊತ್ತವನ್ನು ನಿಗದಿ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಸ್ಮೃತಿ ಇರಾನಿ, ಪುತ್ರಿ ಯಾವುದೇ ರೆಸ್ಟೋರೆಂಟ್ ಹೊಂದಿಲ್ಲ, ಲೈಸನ್ಸ್ಗೂ ಅರ್ಜಿ ಸಲ್ಲಿಸಿಲ್ಲ: ದೆಹಲಿ ಹೈಕೋರ್ಟ್