ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕನೆಂದು ಸ್ಥಳೀಯರಿಗೆ ಬೆದರಿಕೆ ಹಾಕಿದ್ದಲ್ಲದೇ, ಬಿಬಿಎಂಪಿಯಲ್ಲಿ ಅಕ್ರಮವಾಗಿ ಗುತ್ತಿಗೆ ಪಡೆಯುತ್ತಿದ್ದಾರೆ ಎನ್ನಲಾದ ಈ ರಾಮಕೃಷ್ಣಯ್ಯ ಎಂಬುವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿಗೆ ದೂರು ಸಲ್ಲಿಸಲಾಗಿದೆ.
ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರಿಗೆ ರಾಜಾಜಿನಗರ ಸೀನಪ್ಪ ಎಂಬುವರು ದೂರು ಸಲ್ಲಿಸಿದ್ದು, ಈ ರಾಮಕೃಷ್ಣಯ್ಯ ತಮ್ಮ ಒಂದೇ ವಿಸಿಟಿಂಗ್ ಕಾರ್ಡ್ ನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ಮುಖಂಡರ ಹೆಸರು, ಭಾವಚಿತ್ರಗಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ, ಇವರು ರಾಜಕೀಯ ನಾಯಕರ ಹೆಸರಿನಲ್ಲಿ ಬಿಬಿಎಂಪಿಯಲ್ಲಿ ಟೆಂಡರ್ ಹಾಗೂ ಗುತ್ತಿಗೆ ಕಾಮಗಾರಿಗಳನ್ನು ಸಹ ಪಡೆದಿದ್ದು, ಅದರಲ್ಲೂ ಪಾಲಿಕೆ ಅರಣ್ಯ ವಿಭಾಗದ ಟೆಂಡರ್ ನಲ್ಲಿ ಅಕ್ರಮದ ಆರೋಪ ಕೇಳಿಬಂದಿದೆ. ಈ ಕೂಡಲೇ ರಾಮಕೃಷ್ಣಯ್ಯ ವಿರುದ್ಧ ಪಕ್ಷದ ನಾಯಕರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ತನಿಖೆಗೆ ಒತ್ತಾಯ: ಈ ಹಿಂದೆ ಮಾಜಿ ಸಚಿವ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೆಸರು ಹೇಳಿಕೊಂಡು ವಂಚನೆಗೈದ ಆರೋಪದಲ್ಲಿ ಬಸವೇಶ್ವರ ನಗರ ಠಾಣಾ ಪೊಲೀಸರು ರಾಮಕೃಷ್ಣಯ್ಯನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದರು. ಇದಾದ ಬಳಿಕ ಸ್ಥಳೀಯ ನಾಯಕರ ಲೆಟರ್ ಹೆಡ್ ದುರ್ಬಳಕೆ ಆರೋಪದಲ್ಲೂ ಇವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಇದನ್ನೇ ಕಾಯಕ ಮಾಡಿಕೊಂಡಿದ್ದ ಈ ವ್ಯಕ್ತಿ ಸ್ಥಳೀಯ ಅಧಿಕಾರಿಗಳಿಗೆ ಬೆದರಿಕೆ ಹಾಕಿ, ಗುತ್ತಿಗೆ ಕಾಮಗಾರಿಗಳನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕೆಂದು ಸೀನಪ್ಪ ಒತ್ತಾಯಿಸಿದ್ದಾರೆ.