ಬೆಂಗಳೂರು: ನಗರದಲ್ಲಿ ಅನಧಿಕೃತ ಕ್ಯಾಬ್ಗಳ ಹಾವಳಿಯೂ ಜೋರಾಗಿದ್ದು, ಖಾಸಗಿ ವಾಹನಗಳನ್ನು ಅನಧಿಕೃತ ಟ್ಯಾಕ್ಸಿಗಳಾಗಿ ಪರಿವರ್ತಿಸಿ, ಬಾಡಿಗೆ ಆಧಾರದ ಮೇಲೆ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ವಂಚಿಸುತ್ತಿವೆ.
ಅದನ್ನು ಹತ್ತಿಕ್ಕಲು ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಮುಂದಾದರೂ ತಂತ್ರಜ್ಞಾನ ಸೇರಿದಂತೆ ಮೂಲಸೌಕರ್ಯ ಕೊರತೆ ಪರಿಣಾಮ ಅನಧಿಕೃತ ಚಾಲಕರಿಗೆ ಅಕ್ರಮ ಹಣ ಸಂಪಾದನೆ ದಾರಿಯಾಗಿದೆ. ಈ ಮೂಲಕ ಹಳದಿ ಬೋರ್ಡ್ ಹೊಂದಿರುವ ಕ್ಯಾಬ್ ಚಾಲಕರ ಹೊಟ್ಟೆಗೆ ಕನ್ನ ಹಾಕುತ್ತಿದ್ದಾರೆ.
ಕ್ಯಾಬ್ ಚಲಾಯಿಸಲು ಸರ್ಕಾರದ ಪರವಾನಗಿ ಪಡೆಯಬೇಕು. ಇದಕ್ಕಾಗಿ ನಿಗದಿತ ಶುಲ್ಕವಿದೆ ಹಾಗೂ ಪರವಾನಗಿ ನವೀಕರಣಕ್ಕೆ ಕೂಡ ಶುಲ್ಕ ಕಟ್ಟಬೇಕು. ಇನ್ನು ಬಿಳಿ ಬೋರ್ಡ್ನ ವಾಹನಗಳನ್ನು ಬಾಡಿಗೆಗೆ ಬಳಸಿಕೊಳ್ಳಬೇಕಾದರೆ, ಅನುಮತಿ ಪಡೆದು ಶುಲ್ಕ ಭರಿಸಿ ಮಾಸಿಕ ತೆರಿಗೆ, ವಿಮೆ, ರಹದಾರಿ ಶುಲ್ಕ ತುಂಬಿ ಹಳದಿ ಬಣ್ಣದ ಬೋರ್ಡ್ ಆಗಿ ಪರಿವರ್ತನೆ ಮಾಡಿಕೊಂಡು ನಂತರ ಬಾಡಿಗೆ ಹೋಗಬಹುದು.
ಆದರೆ ಹಲವಾರು ಖಾಸಗಿ ವಾಹನ ಮಾಲೀಕರು, ಪರವಾನಗಿ ಪಡೆಯದೇ ತಮ್ಮ ವಾಹನಗಳನ್ನು ಕ್ಯಾಬ್‌ಗಳಾಗಿ ಮಾರ್ಪಾಡು ಮಾಡಿದ್ದಾರೆ. ಇದರಿಂದ ಪ್ರಾಮಾಣಿಕ ಟ್ಯಾಕ್ಸಿ ಚಾಲಕರಿಗೆ ಬಾಡಿಗೆ ಕಡಿಮೆಯಾಗಿದೆ. ಅಲ್ಲದೆ ಸರ್ಕಾರದ ಸೇರಬೇಕಾದ ತೆರಿಗೆ ಸೋರಿಕೆಯಾಗುತ್ತಿದೆ.
ಬೆಂಗಳೂರಿನಲ್ಲಿ ಸುಮಾರು 1,92,862 ಮ್ಯಾಕ್ಯಿ ಕ್ಯಾಬ್ಗಳು ಓಡಾಡುತ್ತಿವೆ. ಈ ಪೈಕಿ ವೈಟ್ ಬೋರ್ಡ್ ಹೊಂದಿರುವ ಕ್ಯಾಬ್ಗಳು ತಮ್ಮದೆ ಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರ ತಡೆಗೆ ಇಲಾಖೆಯಲ್ಲಿ ತಂತ್ರಜ್ಞಾನ ಮತ್ತು ಸಿಬ್ಬಂದಿ ಕೊರತೆ ಕಾರಣ ಅಕ್ರಮ ಕ್ಯಾಬ್ಗಳ ಪತ್ತೆ ಕಷ್ಟವಾಗುತ್ತಿದೆ.
ಮುಖ್ಯವಾಗಿ ಸುರಕ್ಷತೆ ಎಷ್ಟರ ಮಟ್ಟಿಗಿದೆ ಎಂಬುದರ ಬಗ್ಗೆ ಯೋಚಿಸಬೇಕಾಗುತ್ತದೆ. ಒಂದು ವೇಳೆ ಇಂತಹ ಕ್ಯಾಬ್ಗಳು ಸಿಕ್ಕಿಬಿದ್ದರೆ ಪರ್ಮಿಟ್ ಉಲ್ಲಂಘನೆ, ಮೋಟಾರ್ ಕಾಯ್ದೆ (ಸೆಕ್ಷನ್ 8(b)) ತೆರಿಗೆ ವಂಚನೆಯಡಿ ಪ್ರಕರಣ ದಾಖಲಿಸಿ ವಾಹನ ಜಪ್ತಿ ಮಾಡಲಾಗುವುದು ಎಂದು ಯಶವಂತಪುರ ಆರ್ಟಿಒ ಎಚ್.ರಾಜಣ್ಣ ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.