ಬೆಂಗಳೂರು : ಮಂಗಳೂರಿನ ಮಿನಿ ವಿಧಾನಸೌಧದ ಆವರಣದಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿರುವುದು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಮಾಡಿದೆ.
ದಕ್ಷಿಣ ಕನ್ನಡ ಜಿಲ್ಲಾ ಪ್ರಜಾವೇದಿಕೆ ಅಧ್ಯಕ್ಷ ಪಿ.ಮನೋಹರ ನಾಥ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಆಲಿಸಿದ ಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು. ಅಲ್ಲದೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಮನವಿ:
ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಹೋಗುತ್ತಿದ್ದು, ಪಾರ್ಕಿಂಗ್ ಸಮಸ್ಯೆಯೂ ಇದೆ. ಹಾಗಿದ್ದೂ ವಾಣಿಜ್ಯ ಉದ್ದೇಶಗಳಿಗೆ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಪಾರ್ಕಿಂಗ್ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ, ಪಾರ್ಕಿಂಗ್ ಗೆ ತೊಂದರೆ ಆಗಲಿದೆ. ಹೀಗಾಗಿ ಕಟ್ಟಡ ನಿರ್ಮಾಣ ಮಾಡದಂತೆ ಸ್ಥಳೀಯ ತಹಶೀಲ್ದಾರ್ ಹಾಗೂ ಸ್ಮಾರ್ಟ್ ಸಿಟಿ ಯೋಜನಾ ನಿರ್ದೇಶಕರಿಗೆ ಸೂಚಿಸಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.