ಬೆಂಗಳೂರು : ಈರುಳ್ಳಿ ಬೇಸಾಯಕ್ಕೆ ಕೂಲಿ ಕಾರ್ಮಿಕರ ಸಮಸ್ಯೆ ಸಾಕಷ್ಟಿದೆ. ಸದ್ಯ ಕೂಲಿ ಕಾರ್ಮಿಕರ ಸಮಸ್ಯೆಗೆ ಅರ್ಕಾ ವಿದ್ಯುತ್ ಚಾಲಿತ ಈರುಳ್ಳಿ ಕಾಂಡ ಕತ್ತರಿಸುವ ಯಂತ್ರ ಮತ್ತು ಅರ್ಕಾ ಈರುಳ್ಳಿ ಬೀಜ ಬಿತ್ತುವ ಸಾಧನ ಪರಿಹಾರ ಕೊಟ್ಟಿದೆ.
ಕರ್ನಾಟಕದ ಉತ್ತರ ಭಾಗ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನ ಬೆಳೆಯಲಾಗುತ್ತದೆ. ಆದರೆ, ಈರುಳ್ಳಿ ಬೇಸಾಯಕ್ಕೆ ಕೂಲಿ ಕಾರ್ಮಿಕರ ಸಮಸ್ಯೆ ಸಾಕಷ್ಟಿದೆ.
ಈ ನಿಟ್ಟಿನಲ್ಲಿ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಸ್ಥೆ (IIHR) ಕೂಲಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ನೀಡಿದೆ. 20 ಕಾರ್ಮಿಕರು ಮಾಡುವ ಕೆಲಸವನ್ನು ಒಂದು ಯಂತ್ರ ಮಾಡುತ್ತದೆ.
ಈರುಳ್ಳಿ ಕೊಯ್ಲು ನಂತರ ಈರುಳ್ಳಿಯ ಕಾಂಡ ಕತ್ತರಿಸುವ ಕೆಲಸಕ್ಕೆ ಸಾಕಷ್ಟು ಕೂಲಿ ಕಾರ್ಮಿಕರ ಅವಶ್ಯಕತೆಯಿದೆ. ಕೂಲಿ ಮತ್ತು ಕಾರ್ಮಿಕರ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ಈರುಳ್ಳಿ ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಸದ್ಯ IIHR ಅವಿಷ್ಕಾರದ ಅರ್ಕಾ ವಿದ್ಯುತ್ ಚಾಲಿತ ಕಾಂಡ ಕತ್ತರಿಸುವ ಯಂತ್ರ ಮತ್ತು ಅರ್ಕಾ ಈರುಳ್ಳಿ ಬೀಜ ಬಿತ್ತುವ ಸಾಧನ ರೈತರಿಗೆ ಉಪಯುಕ್ತವಾಗಿದೆ.
ಗಂಟೆಗೆ ಒಂದು ಕ್ವಿಂಟಾಲ್ ಈರುಳ್ಳಿ ಕಾಂಡ ಕತ್ತರಿಸುತ್ತದೆ : 20 ಕಾರ್ಮಿಕರು ಮಾಡುವ ಕೆಲಸವನ್ನು ಈ ಯಂತ್ರ ಮಾಡುತ್ತದೆ. ಯಂತ್ರದೊಳಗೆ ಸ್ಟೀಲ್ ಬ್ಲೇಡ್ ಅಳವಡಿಸಲಾಗಿದ್ದು, ಇವು ಈರುಳ್ಳಿಯ ಕಾಂಡವನ್ನು ಕತ್ತರಿಸುತ್ತವೆ. ಈರುಳ್ಳಿಗೆ ಹಾನಿ ಮಾಡದೆ ಗುಣಮಟ್ಟದ ಈರುಳ್ಳಿ ಹೊರಗೆ ಬರುತ್ತದೆ. ಹೊರಗೆ ಬರುವ ಈರುಳ್ಳಿಯನ್ನ ನೇರವಾಗಿ ಮೂಟೆಗೆ ತುಂಬಿ ಸಾಗಾಟ ಮಾಡಬಹುದು. ಈ ಯಂತ್ರದ ಬೆಲೆ 10 ಲಕ್ಷ ರೂ.
ಅರ್ಕಾ ಈರುಳ್ಳಿ ಬೀಜ ಬಿತ್ತುವ ಸಾಧನ : ಈರುಳ್ಳಿ ಬಿತ್ತನೆಯು ಸಹ ಕೂಲಿ ಕಾರ್ಮಿಕರನ್ನ ಅವಲಂಬಿಸಿದೆ. ಈ ಯಂತ್ರದಿಂದ ಈರುಳ್ಳಿ ಬೀಜದ ಉಳಿತಾಯವಾಗುತ್ತದೆ. ಕೈಯಿಂದ ಬಿತ್ತನೆ ಮಾಡುವಾಗ 3ರಿಂದ 4 ಕೆಜಿ ಈರುಳ್ಳಿ ಬೀಜ ಬೇಕಾಗುತ್ತದೆ. ಈ ಯಂತ್ರದಲ್ಲಿ 2 ರಿಂದ 2.5 ಕೆಜಿ ಈರುಳ್ಳಿ ಬೀಜ ಬೇಕಾಗುತ್ತೆ.
1.5 ಈರುಳ್ಳಿ ಬೀಜದ ಉಳಿಯಲ್ಲಿದೆ. ಒಂದು ಕೆಜಿ ಈರುಳ್ಳಿ ಬೀಜದ ಬೆಲೆ ಒಂದು ಸಾವಿರ ಇದ್ದು ಇದರಿಂದ ರೈತನಿಗೆ 2 ಸಾವಿರ ರೂ.ಉಳಿತಾಯವಾಗುತ್ತದೆ. ಕೈಯಿಂದ ಚೆಲ್ಲಿದ್ದಾಗ ಒಂದೇ ಕಡೆ ಬೀಜಗಳು ಬೀಳುತ್ತದೆ ಮತ್ತು ಕೆಲವೆಡೆ ಬೀಳುವುದೇ ಇಲ್ಲ.
ಆದರೆ, ಯಂತ್ರದ ಮೂಲಕ ಬಿತ್ತನೆ ಮಾಡಿದ್ದಾಗ ಸಮಾನಂತರವಾಗಿ ಈರುಳ್ಳಿ ಬೀಜ ಬೀಳುತ್ತೆ. ಸಮಾನ ಅಂತರದಲ್ಲಿ ಈರುಳ್ಳಿ ಬೆಳೆಯುವುದರಿಂದ ಈರುಳ್ಳಿ ಗಾತ್ರ ಚೆನ್ನಾಗಿ ಬರುತ್ತೆ. ಈ ಯಂತ್ರದ ಬೆಲೆ 6 ಸಾವಿರ ರೂ.