ಬೆಂಗಳೂರು: ಕೋವಿಡ್-19 ತಡೆಗಟ್ಟುವ ಹಿನ್ನೆಲೆ ಲಾಕ್ಡೌನ್ ಜಾರಿಯಲ್ಲಿದ್ದು, ನಗರದಲ್ಲಿರುವ ವಲಸಿಗರು ಬಾಡಿಗೆ ಪಾವತಿಸಲು ಸಾಧ್ಯವಾಗದಿದ್ರೆ ಮಾಲೀಕರು ಮನೆಯಿಂದ ಹೊರ ಹಾಕುವಂತಿಲ್ಲ. ಕಾನೂನು ಬಾಹಿರವಾಗಿ ಹೊರ ಹಾಕಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ.
ವಲಸಿಗರು, ವಸತಿ ಮತ್ತು ವಸತಿಯೇತರರನ್ನು ಹೊರ ಹಾಕಿದರೆ ಶಿಸ್ತು ಕ್ರಮದ ಬಗ್ಗೆ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ-2005ರ ಸೆಕ್ಷನ್ 24ರ ಕಲಂ(l) ರನ್ವಯ ಆಯೋಜಿಸಲಾಗಿರುವ ಅಧಿಕಾರವನ್ನು ಚಲಾಯಿಸಿ, ನಗರದಲ್ಲಿರುವ ವಲಸಿಗರು, ವಸತಿ ಮತ್ತು ವಸತಿಯೇತರರನ್ನು ಬಾಡಿಗೆ ಪಾವತಿಸದಿರುವುದನ್ನು ಕಾರಣವಾಗಿ ಇಟ್ಟುಕೊಂಡು ಕಾನೂನು ಬಾಹಿರವಾಗಿ ಹೊರ ಹಾಕುವ ಪ್ರಕ್ರಿಯೆಯನ್ನು ಕೈಗೊಳ್ಳಬಾರದಾಗಿ ತಿಳಿಸಿದ್ದಾರೆ.
ಅಂತಹ ಕಾನೂನು ಬಾಹಿರ ಕ್ರಮಗಳನ್ನು ಕೈಗೊಂಡಲ್ಲಿ ಸಂಬಂಧಪಟ್ಟವರ ವಿರುದ್ಧ Section 51 of the DMACT ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಶ್ರಯ ನಗರದಲ್ಲಿರುವ ನಿರಾಶ್ರಿತರು, ನಿರ್ಗತಿಕರು, ವಲಸಿಗರಿಗೆ ಆಶ್ರಯ ಮತ್ತು ಅಗತ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಬಿಬಿಎಂಪಿ ಮಾಡಿದೆ.
ಸಮುದಾಯ ಭವನ, ಕಲ್ಯಾಣ ಮಂಟಪ, ಶಾಲೆ ಮತ್ತು ವಿದ್ಯಾರ್ಥಿ ನಿಲಯ ಕಟ್ಟಡಗಳನ್ನು ಪರಿಹಾರ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ.