ಬೆಂಗಳೂರು: ಲಾಕ್ ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಿದ್ದು, ತುರ್ತು ಸೇವೆ ಸಲ್ಲಿಸುವ ಸಿಬ್ಬಂದಿ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಒಂದು ವೇಳೆ ತುರ್ತು ಸೇವೆ ಸಲ್ಲಿಸುವ ಸಿಬ್ಬಂದಿಗೆ ಪೊಲೀಸರು ಅಡ್ಡಿಪಡಿಸಿದಲ್ಲಿ ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ತುರ್ತು ಸೇವೆ ಸಲ್ಲಿಸುವ ಸಿಬ್ಬಂದಿಗೆ ಅಡ್ಡಿಪಡಿಸುತ್ತಿರುವ ಕುರಿತು ನಮ್ಮ ಪೊಲೀಸರ ಬಗ್ಗೆ ಹಲವು ಕಡೆಯಿಂದ ದೂರು ಬರುತ್ತಿವೆ. ಆ ರೀತಿಯ ದೂರು ಹೇಳುವುದಾದರೆ 100ಕ್ಕೆ ಕರೆ ಮಾಡಿ ತಿಳಿಸಬಹುದು. ವೈದ್ಯರು, ಪತ್ರಕರ್ತರು ಸೇರಿದಂತೆ ತುರ್ತು ಸೇವೆ ಸಲ್ಲಿಸುವ ಸಿಬ್ಬಂದಿ ಸಂಚಾರದ ವೇಳೆ ತಮ್ಮ ಸಂಸ್ಥೆಯ ಐಡಿ ಕಾರ್ಡ್ ಇಟ್ಟುಕೊಂಡು ಓಡಾಡಿ. ಯಾಕೆಂದರೆ ಕೆಲವರು ಸುಮ್ಮನೆ ಹೊರಗಡೆ ತಿರುಗಾಡುತ್ತಿದ್ದಾರೆ. ಹೀಗಾಗಿ ಎಮರ್ಜೆನ್ಸಿ ಇದ್ದು ಹೊರಗಡೆ ಬಂದಿದ್ದರೆ ಐಡಿ ಕಾರ್ಡ್, ಕಂಪನಿಯ ಸಮವಸ್ತ್ರ ಅಥವಾ ಕೋವಿಡ್ -19 ತುರ್ತು ಸೇವೆ ಬ್ಯಾನರ್ ಹಾಕಿಕೊಂಡು ಹೊರಗಿ ಬನ್ನಿ ಎಂದು ಸಲಹೆ ನೀಡಿದ್ದಾರೆ.