ಬೆಂಗಳೂರು: ಅನಂತಕುಮಾರ್ ಅವರು ಇದ್ದಿದ್ದರೇ ಯಾವುದೇ ಕಾರಣಕ್ಕೂ ಕಾವೇರಿ ವಿವಾದ ಇಷ್ಟರಮಟ್ಟಿಗೆ ಹೋಗಲು ಬಿಡುತ್ತಿರಲಿಲ್ಲ. ಅವರು ಅಜಾತಶತ್ರು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ನಗರದ ಧೊಂಡುಸಾ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಅನಂತ ನಮನ 64 - ಅನಂತಕುಮಾರ್ ಅವರ 64 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಹಸಿರು ಭಾನುವಾರ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅನಂತಕುಮಾರ್ ಕೇಂದ್ರ ಸಚಿವರಾಗಿದ್ದ ವೇಳೆ ಕಾವೇರಿ ನೀರಿನ ಬಗ್ಗೆ ರಾತ್ರೋರಾತ್ರಿ ಅಫಿಡವಿಟ್ ಬದಲಾಯಿಸಿ ಕರ್ನಾಟಕದ ಪರವಾಗಿ ನಿಂತಿದ್ದರು. ರಾಜ್ಯದ ಹಿತಾಸಕ್ತಿಗೆ ಯಾವುದೇ ತೊಂದರೆ ತೆಗೆದುಕೊಳ್ಳಲು ಅವರು ಸದಾ ತಯಾರಿರುತ್ತಿದ್ದರು. 1985 ರಲ್ಲಿ ನನಗೆ ಮೊದಲ ಬಾರಿಗೆ ವಿಧಾನಸಭೆ ಟಿಕೆಟ್ ಸಿಕ್ಕಿದಾಗ ಅನಂತ್‌ಕುಮಾರ್ ರಹಸ್ಯವಾಗಿ 5 ಸಾವಿರ ಹಣ ನೀಡಿದ್ದರು. ರಾಜ್ಯದ ಪರವಾಗಿ ನಿಲ್ಲುತ್ತಿದ್ದ ಅವರನ್ನು ಸರ್ವಪಕ್ಷ ಸಭೆಯಲ್ಲಿ ಎಲ್ಲರೂ ನೆನಪಿಸಿಕೊಂಡರು ರಂದು ತಿಳಿಸಿದರು.
ಸಹೋದರಿ ತೇಜಸ್ವಿನಿ ರಾಜಕೀಯದಲ್ಲಿ ಮುನ್ನುಗ್ಗಲಿ: ನನ್ನ ಸಹೋದರಿ ತೇಜಸ್ವಿನಿ ಧೈರ್ಯ ಮಾಡಿ ರಾಜಕೀಯದಲ್ಲಿ ಮುನ್ನುಗ್ಗಬೇಕು. ಅನಂತಕುಮಾರ್ ಅವರ ಜೊತೆಗಿನ ನಿಮ್ಮದೇ ಆದ ರಾಜಕೀಯ ಜ್ಞಾನವಿದೆ, ನೀವು ರಾಜಕೀಯಕ್ಕೆ ಬರಬೇಕು ಎಂದರು. ನೀವು ಇಲ್ಲೇ ಅಡುಗೆ ಮನೆಯಲ್ಲಿ ಅದಮ್ಯ ಚೇತನದ ಜೊತೆಯಲ್ಲಿ ಇರಬೇಕಾಗುತ್ತದೆ. ನಿಮ್ಮ ಹಿಂದೆ ದೊಡ್ಡ ಪಡೆ ಇದೆ, ಸಮಾಜವಿದೆ. ತೇಜಸ್ವಿನಿ ಅವರೇ ನೀವು ಮುನ್ನುಗ್ಗಬೇಕು. ಹೊಲವನ್ನು ಉಳುಮೆ ಮಾಡದಿದ್ದರೆ ಮಟ್ಟ ಆಗುವುದಿಲ್ಲ. ಶಿಲೆ ಶಿಲ್ಪಿ ಕೈಗೆ ಸಿಗದಿದ್ದರೆ ಕಲೆ ಅರಳುವುದಿಲ್ಲ, ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ಕಾರಣಕ್ಕೆ ನೀವು ರಾಜಕಾರಣದಲ್ಲಿ ಇರಬೇಕು ಎಂದು ಸಲಹೆ ನೀಡಿದರು.
ಮೆಟ್ರೋ ಬರಲು ಅನಂತಕುಮಾರ್ ಕಾರಣ: ನಾನು ಎಸ್ ಎಂ ಕೃಷ್ಣ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದೆನು. ಕೇಂದ್ರದಲ್ಲಿ ಅನಂತಕುಮಾರ್ ನಗರಾಭಿವೃದ್ಧಿ ಸಚಿವರಿದ್ದರು. ಹಿಂದಿನ ಜೆ ಎಚ್ ಪಟೇಲ್ ಸರ್ಕಾರ ಮೋನೊ ರೈಲಿಗೆ ಒಪ್ಪಿಗೆ ನೀಡಿತ್ತು. ಹುಡ್ಕೋ ಸಂಸ್ಥೆಯಿಂದ ನನ್ನನ್ನು ಹಾಗೂ ಇತರ ಸ್ನೇಹಿತರನ್ನು ವಿದೇಶಕ್ಕೆ ಮೆಟ್ರೊ ಕಾರ್ಯಾಚರಣೆ ಬಗ್ಗೆ ಅಧ್ಯಯನ ಮಾಡಲು ಪ್ರವಾಸ ಕಳುಹಿಸಿದ್ದರು. ಶ್ರೀಧರನ್ ಅವರು ಜೊತೆ ಇದ್ದರು. ನಾವು ಮೆಟ್ರೋ ಇದ್ದರೆ ಅನುಕೂಲ ಎಂದು ಎಸ್ ಎಂ ಕೃಷ್ಣ ಅವರಿಗೆ ವರದಿ ನೀಡಿದೆವು. ಅವರು ಅನಂತಕುಮಾರ್ ಅವರನ್ನು ಭೇಟಿಯಾಗಲು ಹೇಳಿದರು. ಕೇವಲ ಒಂದೇ ದಿನದಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿಸಿ, ಕೇಂದ್ರದಿಂದ ಒಪ್ಪಿಗೆ ಕೊಡಿಸಿದರು ಎಂದು ಸ್ಮರಿಸಿದರು.
ರಾಜ್ಯದ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಕಾರ್ಯ ನಿರ್ವಹಿಸುತ್ತಿದ್ದವರು ಅನಂತಕುಮಾರ್. ರಾತ್ರಿ ಹಗಲೆನ್ನದೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದ ವ್ಯಕ್ತಿಯನ್ನು ರಾಜ್ಯ ಕಳೆದುಕೊಂಡಿದೆ. ಈ ಕಾರ್ಯಕ್ರಮದಲ್ಲಿ ಬಹಳ ಸಂತೋಷದಿಂದ ಭಾಗಿಯಾಗಿದ್ದೇನೆ. ನನ್ನ ಆತ್ಮೀಯ ಮಿತ್ರನನ್ನು ಸ್ಮರಿಸುವ ಅವಕಾಶ ದೊರೆತಿದೆ. ಅವಕಾಶ ಇದ್ದಾಗ ಎಲ್ಲರಿಗೂ ಒಳ್ಳೆಯದನ್ನು ಮಾಡುವ ಸ್ವಭಾವ ಅವರದ್ದು. ಅನಂತಕುಮಾರ್ ಜೀವನ ನೋಡಿದರೆ ತಮ್ಮ ಸ್ವಂತಕ್ಕೆ ಏನು ಇಲ್ಲದೇ ಎಲ್ಲವನ್ನೂ ಬೇರೆಯವರಿಗೆ ಮುಡಿಪಾಗಿ ಇಟ್ಟಿದ್ದರು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ನನ್ನ ಮತ್ತು ಅನಂತಕುಮಾರ್ ಅವರ ಸ್ನೇಹ ರಾಜಕೀಯ ಮೀರಿದ್ದು. ಜೊತೆಯಲ್ಲಿ ರಾಜ್ಯ ಸುತ್ತಿ ಪಕ್ಷವನ್ನು ಬೆಳೆಸಿದೆವು. ಇಂದು ನಮ್ಮ ಪಕ್ಷ ಈ ಹಂತಕ್ಕೆ ಬರಲು ಪ್ರಮುಖ ಕಾರಣ ಅನಂತಕುಮಾರ್. ಅವರು ಇನ್ನೂ ಹೆಚ್ಚಿನ ಕಾಲ ಇರಬೇಕಿತ್ತು. ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ಅವರ ಮಾರ್ಗದರ್ಶನ ಅಗತ್ಯವಿತ್ತು. ತೇಜಸ್ವಿನಿ ಅನಂತ ಕುಮಾರ್ ಅವರು ಅದಮ್ಯ ಚೇತನ ಸಂಸ್ಥೆಯ ಮೂಲಕ ದಿವಂಗತ ಅನಂತಕುಮಾರ್ ಅವರ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ದೇವರು ಕೊಡಲಿ ಎಂದರು.
ಇದೇ ಸಂದರ್ಭದಲ್ಲಿ ಅದಮ್ಯ ಚೇತನ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ನೈಸರ್ಗಿಕ ಸಾಬೂನುಗಳನ್ನು ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಅನಂತ ನಮನ ಪುಸ್ತಕ ಲೋಕಾರ್ಪಣೆ ಗೊಳಿಸಿದರು. ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಕೃಷ್ಣಾ ಭಟ್, ಪದ್ಮ ವಿಭೂಷಣ ವಿ.ಕೆ ಅತ್ರೆ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹಾಜರಿದ್ದರು.
ಇದನ್ನೂಓದಿ: ಕಾವೇರಿ ಸಮಸ್ಯೆಗೆ ವಿರೋಧ ಪಕ್ಷಗಳು ರಾಜಕೀಯ ಆಯಾಮ ಕಲ್ಪಿಸುತ್ತಿವೆ: ಡಿ ಕೆ ಶಿವಕುಮಾರ್