ಬೆಂಗಳೂರು: ಕಡೆಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ಇಂದಿರಾ ಕ್ಯಾಂಟೀನ್ ಮೂಲಕ ಆಹಾರ ಪೊಟ್ಟಣ ವಿತರಣೆಗೆ ಗುರುತಿನ ಚೀಟಿ ಕಡ್ಡಾಯವಲ್ಲ ಎಂಬ ಆದೇಶ ಹೊರಡಿಸಿದ್ದಾರೆ.
ಓದಿ: ಬಡ ಕೂಲಿ ಕಾರ್ಮಿಕರ ಹಸಿವು ನೀಗಿಸಲು ಇಂದಿರಾ ಕ್ಯಾಂಟಿನ್ಗೆ ಚಾಲನೆ
ಬುಧವಾರ ಬೆಳಗ್ಗೆಯಿಂದಲೂ ಮೂರು ಹೊತ್ತು ಉಚಿತ ಊಟ ವಿತರಣೆ ಇಂದಿರಾ ಕ್ಯಾಂಟೀನ್ ಗಳಲ್ಲಿ ಆರಂಭವಾಗಿದೆ. ಆದರೆ ಕ್ಯಾಂಟೀನ್ ಸಿಬ್ಬಂದಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಕೇಳಿದಾಗ ಹಸಿದ ಹೊಟ್ಟೆಯಲ್ಲಿದ್ದ ಅನೇಕರು ಜಗಳಕ್ಕೆ ನಿಂತಿದ್ದರು. ಇನ್ನೂ ಕೆಲವರು, ನಾವು ಫುಟ್ ಪಾತ್ನಲ್ಲಿರೋರು, ಗುರುತಿನ ಚೀಟಿ ಎಲ್ಲಿಂದ ಎಂದು ರೇಗಿದ್ದರು. ಈ ಬಗ್ಗೆ ಇಂದಿರಾ ಕ್ಯಾಂಟೀನ್ ಸಿಬ್ಬಂದಿ 'ಈಟಿವಿ ಭಾರತ'ಕ್ಕೆ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. ಕಡೆಗೂ ಬಿಬಿಎಂಪಿ ಮುಖ್ಯ ಆಯುಕ್ತರು ಗುರುತಿನ ಚೀಟಿ ಕಡ್ಡಾಯವಲ್ಲ ಎಂದು ನಿರ್ಗತಿಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.
12-05-2021 ರಿಂದ (ಇಂದಿನಿಂದ) 24-05-21 ರವರೆಗೆ ಬಡವರ್ಗದ ಜನರು, ವಲಸಿಗರು, ಕೂಲಿ ಕಾರ್ಮಿಕರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿದಂತೆ ದಿನದ ಮೂರು ಹೊತ್ತು ಆಹಾರ ಪೊಟ್ಟಣಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.
ಅರ್ಹ ಫಲಾನುಭವಿಗಳು ಗುರುತಿನ ಚೀಟಿ ತೋರಿಸಿ ಆಹಾರ ಪೊಟ್ಟಣಗಳನ್ನು ಪಡೆಯುವುದು ಸಮಸ್ಯೆ ಆಗುತ್ತಿರುವುದರಿಂದ ಇನ್ಮುಂದೆ ಈ ತೊಂದರೆ ಎದುರಾಗಲ್ಲ. ನಿರ್ಗತಿಕರು ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಆಹಾರದ ಪೊಟ್ಟಣಗಳನ್ನು ಉಚಿತವಾಗಿಯೇ ಪಡೆಯಬಹುದೆಂದು ಮುಖ್ಯ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.