ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಐಡಿಬಿಐ ಬ್ಯಾಂಕಿನಿಂದ 65.33 ರೂಪಾಯಿ ಸಾಲ ಪಡೆದು ವಂಚಿಸಿದ್ದ ಉದ್ಯಮಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಐಡಿಬಿಐ ಬ್ಯಾಂಕಿನ ಉಪಪ್ರಬಂಧಕ ಜಿ.ಬಸಂತ್ ಚಕ್ರವರ್ತಿ ನೀಡಿದ ದೂರಿನ ಮೇರೆಗೆ ಗ್ರೀನ್ ಆರ್ಗ್ಯಾನಿಕ್ಸ್ ಪ್ರೈವೈಟ್ ಲಿಮಿಟೆಡ್ (ಜಿಓಐಪಿಎಲ್) ನಿರ್ದೇಶಕರಾದ ರಮೇಶ್ ಬಿ.ಗೌಡ, ಜೆ.ಸಿ.ರಮ್ಯ, ಚಂದ್ರಶೇಖರ್ ಬಾಲಸುಬ್ರಮಣ್ಯ ವಿರುದ್ಧ ಸಂಚು, ನಂಬಿಕೆದ್ರೋಹ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಂಡಿದೆ.
ರಮೇಶ್ ಬಿ.ಗೌಡ, ಜೆ.ಸಿ.ರಮ್ಯ ದಂಪತಿ, ದೊಡ್ಡಬಳ್ಳಾಪುರ, ಶ್ರೀರಂಗಪಟ್ಟಣ ಹಾಗೂ ಬೇಲೂರಿನ 65 ಎಕರೆಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿ ವಿದೇಶಕ್ಕೆ ರಫ್ತು ಮಾಡುವುದಾಗಿ ಹೇಳಿ ಸಾಲ ಪಡೆದಿದ್ದರು. 2009 ರಲ್ಲಿ ಐಡಿಬಿಐ ಬ್ಯಾಂಕ್ ಕೃಷಿ ಸಾಲ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿದ ರಮೇಶ್ ಗೌಡ ಹಾಗೂ ಇತರರು ಕೆನರಾ ಬ್ಯಾಂಕ್ ನಲ್ಲಿ 41.07 ಕೋಟಿ ಸಾಲ ವರ್ಗಾಯಿಸಿಕೊಂಡು ಹೆಚ್ಚುವರಿಯಾಗಿ ಸಾಲ ನೀಡುವಂತೆ ಮನವಿ ಮಾಡಿದ್ದರು.
2015ರಲ್ಲಿ ವಿವಿಧ ಹಂತಗಳಲ್ಲಿ ಬ್ಯಾಂಕಿನಿಂದ 65.33 ಕೋಟಿ ಸಾಲ ಪಡೆಯಲಾಗಿದೆ. ಅಸಲು ಹಾಗೂ ಬಡ್ಡಿ ಸೇರಿ ಒಟ್ಟು 125.63 ಕೋಟಿ ಬಾಕಿ ಪಾವತಿಯಾಗದ ಕಾರಣ ತನಿಖೆ ಆರಂಭಿಸಲಾಗಿತ್ತು. ಬೇರೆ ಬೇರೆ ಕಂಪೆನಿಗಳ ಮೇಲಿದ್ದ ಸಾಲವನ್ನು ಜಿಓಐಪಿಎಲ್ ಸಾಲ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಐಡಿಬಿಐ ಬ್ಯಾಂಕ್ ಗೆ ಹಣ ವರ್ಗಾವಣೆ ಮಾಡಲಾಗಿತ್ತು. ಅಲ್ಲದೆ ಬ್ಯಾಂಕ್ ನೀಡಿದ ಸಾಲದ ಪೈಕಿ 15 ಕೋಟಿ ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿರುವುದಾಗಿ ದೂರಿನಲ್ಲಿ ಜಿ.ಬಸಂತ್ ಚಕ್ರವರ್ತಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪ್ರೇಮವಿವಾಹ: ನವವಿವಾಹಿತನನ್ನು ಥಳಿಸಿದ ಪತ್ನಿಯ ಸಂಬಂಧಿಕರು
ಇದೇ ಕಂಪೆನಿ ಹೆಸರಿನಲ್ಲಿ ಕೆನೆರಾಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಪಡೆದು ವಂಚಿಸಿರುವುದು ಕಂಡುಬಂದಿದೆ.