ಬೆಂಗಳೂರು : ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ವಿ ಸೋಮಣ್ಣ ಸೇರಿದಂತೆ ಬಿಜೆಪಿಯ ಎಲ್ಲ ಹಿರಿಯ ನಾಯಕರನ್ನು ವೈಯಕ್ತಿಕವಾಗಿ ಭೇಟಿ ಮಾಡಲಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಸೋಮವಾರ ಮಾಜಿ ಸಚಿವ ಆರ್ ಅಶೋಕ್ ಅವರನ್ನು ಪದ್ಮನಾಭನಗರದ ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ, ಪಕ್ಷದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು. ಇಂದು ಕುರುಡುಮಲೆ ದೇವಸ್ಥಾನಕ್ಕೆ ಭೇಟಿ ಕೊಡಲಿದ್ದೇನೆ. ಬೂತ್ ಅಧ್ಯಕ್ಷರು ಮತ್ತು ಕೆಲವು ಪ್ರಮುಖರನ್ನು ಭೇಟಿ ಮಾಡಿ ಹಿಂದಿರುಗುವೆ ಎಂದು ಹೇಳಿದರು.
ಇವತ್ತು ಕಾಂಗ್ರೆಸ್ ಶಾಸಕರೇ ಬಹಿರಂಗವಾಗಿ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಬರದ ವಿಚಾರದಲ್ಲಿ ಕಾಂಗ್ರೆಸ್ಸಿನ ನಮ್ಮ ಸರ್ಕಾರ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಆ ಪಕ್ಷದ ಉತ್ತರ ಕರ್ನಾಟಕದ ಶಾಸಕರೊಬ್ಬರು ಹೇಳಿದ್ದಾರೆ. ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಬರಕ್ಕೆ ಸಂಬಂಧಿಸಿ ಜಿಲ್ಲಾ ಪ್ರವಾಸ ಮಾಡುತ್ತಿಲ್ಲ ಎನ್ನುತ್ತಾರೆ. ಒಂದು ರೂಪಾಯಿ ಅನುದಾನ ಬಾರದ ಬಗ್ಗೆ ಮತ್ತೊಬ್ಬ ಶಾಸಕರು ಹೇಳುತ್ತಾರೆ. ಮತ್ತೊಂದು ಕಡೆ ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ. ದಿವಾಳಿ ಅಂಚಿಗೆ ತಲುಪಿದ್ದಾಗಿ ಆಡಳಿತ ಪಕ್ಷದ ಶಾಸಕರು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
136 ಶಾಸಕರಿದ್ದಾರೆ. ಸಾಕಾಗಲಿಲ್ಲವೇ? : ಇತರ ಪಕ್ಷಗಳ ಹಲವು ಶಾಸಕರು ಕಾಂಗ್ರೆಸ್ ಸೇರುವ ಕುರಿತ ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ನಲ್ಲಿ 136 ಶಾಸಕರಿದ್ದಾರೆ. ಸಾಕಾಗಲಿಲ್ಲವೇ?. ಈ ರೀತಿಯ ಉಡಾಫೆ ಮಾತನಾಡುವ ಬದಲು ರಾಜ್ಯದ ಜನ, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದರೆ ಒಳಿತಾಗಲಿದೆ ಎಂದು ಬಿ ವೈ ವಿಜಯೇಂದ್ರ ಕಿಡಿಕಾರಿದರು. ವಿರೋಧ ಪಕ್ಷವಾಗಿ ನಾವು ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಆಡಳಿತ ಪಕ್ಷದ ಶಾಸಕರೇ ಮುಖ್ಯಮಂತ್ರಿಗಳು, ಸರ್ಕಾರದ ಬಗ್ಗೆ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ ಎಂದರು.
ಮಾಜಿ ಸಚಿವ ಆರ್. ಅಶೋಕ್ ಮಾತನಾಡಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಿವಾಸದ ಬದಲಾಗಿ ನನ್ನ ಕೋರಿಕೆ ಮೇರೆಗೆ ನನ್ನ ಕಚೇರಿಗೆ ಬಂದಿದ್ದಾರೆ. ಹಿರಿಯರಾದ ದೊರೆಸ್ವಾಮಿ ನಾಯ್ಡು ಅವರನ್ನು ಭೇಟಿ ಮಾಡಿದ್ದೇವೆ. ಕರ್ನಾಟಕದಲ್ಲಿ ದುರಾಡಳಿತ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ದೊಡ್ಡ ಹೋರಾಟ ಮಾಡುವುದೇ ನಮ್ಮೆಲ್ಲರ ಗುರಿ ಎಂದು ಹೇಳಿದರು.
ವಿಜಯೇಂದ್ರರ ಎದುರು ದೊಡ್ಡ ಸವಾಲಿದೆ. ಭ್ರಷ್ಟ ಸರ್ಕಾರ ಕಿತ್ತೊಗೆಯಲು ನೇತೃತ್ವ ವಹಿಸಲು ನರೇಂದ್ರ ಮೋದಿಜಿ, ಅಮಿತ್ ಶಾ, ನಡ್ಡಾ ಅವರು ಅವಕಾಶ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲುವುದು, ರಾಜ್ಯದಲ್ಲಿ ವರ್ಗಾವಣೆ ದಂಧೆ, ದುರಾಡಳಿತ, ಅಭಿವೃದ್ಧಿ ಕಾರ್ಯ ಸ್ಥಗಿತಕ್ಕೆ ಕಾರಣವಾದ ಸರ್ಕಾರದ ವಿರುದ್ಧವಾಗಿ ದೊಡ್ಡ ಹೋರಾಟ ನಡೆಸಬೇಕಿದೆ. ಅಂಥ ದೊಡ್ಡ ಜವಾಬ್ದಾರಿ ಹೊರುತ್ತಿರುವ ವಿಜಯೇಂದ್ರರಿಗೆ ಶುಭಾಶಯ ತಿಳಿಸುತ್ತೇನೆ ಎಂದರು.
ಇದನ್ನೂ ಓದಿ : ವಂಶಪಾರಂಪರ್ಯ ರಾಜಕಾರಣದ ವಿರೋಧಿ ನಿಲುವು: ಬಿಜೆಪಿ ಬಿಗಿ ನೀತಿಯಲ್ಲಿ ಈಗ 'ಮೃದು ಧೋರಣೆ'!