ಬೆಂಗಳೂರು : ಯಾವುದೇ ಮೀಸಲಾತಿ ಹೋರಾಟಗಳಿಗೆ ನನ್ನ ಬೆಂಬಲ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೀಸಲಾತಿ ಬಗ್ಗೆ ಎಲ್ಲಾ ಸಮುದಾಯಗಳು ಕೇಳುತ್ತಿವೆ. ಸಂವಿಧಾನ ಚೌಕಟ್ಟಿನಲ್ಲೇ ಎಲ್ಲ ಕೆಲಸ ಆಗಬೇಕು. ಹಲವು ಬಾರಿ ಇಂತಹ ಹೋರಾಟಗಳು ನಡೆದಿವೆ. ಇದ್ಯಾವುದಕ್ಕೂ ಅರ್ಥವಿಲ್ಲ ಎಂದರು.
ಈ ಸುದ್ದಿಯನ್ನೂ ಓದಿ: ಸಿಎಂ ರಾಜಕೀಯ ಏಳು-ಬೀಳಿನ ಹಿಂದೆ ಹನುಮನ ಅಭಯ: ಬಿ.ವೈ. ವಿಜಯೇಂದ್ರ
ಮೀಸಲಾತಿ ಹೋರಾಟದ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯಿಸಲಾರೆ. ಒಕ್ಕಲಿಗರು ಇನ್ನೂ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿಲ್ಲ. ನಿರ್ಮಲಾನಂದನಾಥ ಸ್ವಾಮೀಜಿಯವರು ಕರೆದು ಸೂಚನೆ ಕೊಟ್ಟರೆ ಬಳಿಕ ಆ ಬಗ್ಗೆ ಆಲೋಚಿಸಲಾಗುತ್ತದೆ.
ಒಮ್ಮೆಗೆ ಎಲ್ಲ ಸಮುದಾಯದವರು ಸರ್ಕಾರದ ಮೇಲೆ ಮುಗಿಬಿದ್ದರೆ ಮುಖ್ಯಮಂತ್ರಿಗಳಿಗೂ ಕಷ್ಟವಾಗುತ್ತದೆ. ಆದರೂ ಸರ್ಕಾರ ಸಮಿತಿ ಮಾಡುತ್ತಿದೆ. ನೋಡೋಣ ಸಮಿತಿ ವರದಿ ಬಂದ ಬಳಿಕ ಮುಂದೇನಾಗುತ್ತದೋ ಎಂದು ಹೇಳಿದರು.