ಬೆಂಗಳೂರು : ಜೆಡಿಎಸ್ ಪಕ್ಷವು ಎನ್‌ಡಿಎ ಮೈತ್ರಿಕೂಟ ಸೇರುವ ಮೂಲಕ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿದ್ದು, ಉಭಯ ಪಕ್ಷಗಳು ಒಟ್ಟಾಗಿ ಹೋಗಬೇಕಿದೆ. ಹಾಗಾಗಿ ಸದ್ಯದಲ್ಲೇ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸುತ್ತೇನೆ ಎಂದು ರಾಜ್ಯ ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ಆಗಿದ್ದರು. ಈ ಭೇಟಿಯಲ್ಲಿ ವಿಶೇಷತೆ ಏನಿಲ್ಲ, ಸೌಹಾರ್ದಯುತವಾಗಿ ಭೇಟಿ ಮಾಡಿದ್ದರು ಅಷ್ಟೇ. ಕುಮಾರಸ್ವಾಮಿ ಅವರೂ ಕರೆ ಮಾಡಿದ್ದರು. ಮನೆಗೆ ಬಂದು ಹೋಗಿ ಅಂದಿದ್ದಾರೆ. ಸದ್ಯದಲ್ಲೇ ಕುಮಾರಸ್ವಾಮಿ ಅವರ ಮನೆಗೆ ಹೋಗಿ ಮಾತನಾಡಿಸಿಕೊಂಡು ಬರುತ್ತೇನೆ. ಹೇಗೂ ನಮ್ಮ ಜತೆ ಅವರು ಹೊಂದಾಣಿಕೆ ಆಗಿದ್ದಾರೆ. ಹಾಗಾಗಿ ನಾವೆಲ್ಲರೂ ಒಟ್ಟಾಗಿ ಹೋಗಬೇಕಿದೆ ಎಂದರು.
ಇದೇ ವೇಳೆ ಮೈತ್ರಿ ವಿಚಾರದ ಕುರಿತು ಮುಂದಿನ ಮಾತುಕತೆ ನಡೆಸಲು ಹೈಕಮಾಂಡ್ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಅಂತಹ ಆಲೋಚನೆ ಇಲ್ಲ ಎಂದು ತಿಳಿಸಿದರು.
ಪಾಲಿಟಿಕ್ಸ್ ಕೇವಲ ಮ್ಯಾಥ್ಸ್ ಅಲ್ಲ ಕೆಮಿಸ್ಟ್ರಿ ಕೂಡ : ರಾಜಕಾರಣ ಎಂಬುದು ಬರೀ ಮ್ಯಾಥಮೆಟಿಕ್ಸ್ ಅಲ್ಲ, ಅದರಲ್ಲಿ ಕೆಮಿಸ್ಟ್ರಿ ಕೂಡ ಇರುತ್ತದೆ ಎಂದು ಮಾಜಿ ಸಚಿವ ಸಿ ಟಿ ರವಿ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ವಿಶ್ಲೇಷಿಸಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಭಾಗ ಆಗಿರುವುದನ್ನು ನಾವು ಸ್ವಾಗತ ಮಾಡಿದ್ದೇವೆ. ಉಳಿದ ಸಂಗತಿಗಳ ಬಗ್ಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತೀರ್ಮಾನ ಮಾಡಬೇಕಿದೆ. ಇದರ ಜೊತೆಗೆ ಉಳಿದ ಸಂಗತಿಗಳ ಬಗ್ಗೆ ನಾವು ಕುಳಿತು ಯೋಚನೆ ಮಾಡಬೇಕು ಎಂದು ಹೇಳಿದರು.
ಕೆಮಿಸ್ಟ್ರಿ ಸರಿಯಾಗಿ ಕಾರ್ಯಕರ್ತರ ಹಂತದಿಂದ ಸಮನ್ವಯತೆ ಆಗುವಂತೆ ಮಾಡಬೇಕು. ಕೆಳ ಹಂತದಿಂದ ಸಮನ್ವಯತೆ ತಂದರೆ, ಹೆಚ್ಚಿನ ರಾಜಕೀಯ ಲಾಭವನ್ನು ನಿರೀಕ್ಷೆ ಮಾಡಬಹುದು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ. ಈಗಲೇ ನಾವು ಕುಣಿದು ಕುಪ್ಪಳಿಸಿ ಮೈ ಮರೆಯಬಾರದು. ಕೆಳ ಹಂತದಿಂದ ಕಾರ್ಯಕರ್ತರ ಸಮನ್ವಯತೆ ಮೂಡಿಸಿದರೆ ಖಂಡಿತ ಇದಕ್ಕೆ ಜನರು ಆಶೀರ್ವಾದ ಮಾಡುತ್ತಾರೆ ಎಂದರು.
ಇಂಡಿಯಾ ಮೈತ್ರಿ ಕೂಟದಲ್ಲಿ ಯಾರೂ ಲೀಡರ್ ಎನ್ನುವ ಬಗ್ಗೆ ಕ್ಲಾರಿಟಿ ಇಲ್ಲ. ಆದರೆ ಎನ್‌ಡಿಎ ಮೈತ್ರಿ ಕೂಟದಲ್ಲಿ ಮತ್ತೊಮ್ಮೆ ಮೋದಿ ಎಂಬ ಕ್ಲಾರಿಟಿ ಇದೆ. ಹೀಗಾಗಿ ನಾವು ಮಾಡಬೇಕಿದ್ದು, ಕೆಳಹಂತದಿಂದ ಕಾರ್ಯಕರ್ತರನ್ನು ಜೋಡಿಸೋದು ಅಷ್ಟೇ ಎಂದರು.
ಮೈತ್ರಿ ಮಾತುಕತೆ ವೇಳೆ ಗೋವಾ ಸಿಎಂ ಪ್ರಮೋದ್ ಸಾವಂತ್ ಭಾಗಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿ ಟಿ ರವಿ, ಈಗ ಜೆಡಿಎಸ್ ಎನ್‌ಡಿಎ ಭಾಗವಾಗಿದೆ. ಉಳಿದ ವಿಚಾರಗಳ ಬಗ್ಗೆ ರಾಜ್ಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ಕೈಗೊಳ್ಳುತ್ತಾರೆ. ಪ್ರಮೋದ್ ಸಾವಂತ್ ಗೋವಾ ಸಿಎಂ ಮಾತ್ರವಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಕೂಡಾ ಆಗಿದ್ದಾರೆ. ನಾನು ಸಹ ಗೋವಾ, ಮಹಾರಾಷ್ಟ್ರ, ತಮಿಳುನಾಡಿನ ಪ್ರಭಾರಿ. ಪ್ರಮೋದ್ ಸಾವಂತ್ ತಮಗೆ ಕೊಟ್ಟ ಜವಾಬ್ದಾರಿ ನಿಭಾಯಿಸಿದ್ದಾರೆ. ನಮಗೂ ಅಂಥ ಎಷ್ಟೋ ಟಾಸ್ಕ್ ಕೊಟ್ಟಿರುತ್ತಾರೆ. ಟಾಸ್ಕ್ ಅಷ್ಟೇ ಮಾಡುತ್ತೇವೆ, ಪ್ರಮೋದ್ ಸಾವಂತ್ ಜತೆಗೂ ನಾನು ಮಾತನಾಡಿದ್ದೇನೆ ಎಂದರು.
ಇದರಿಂದ ಏನೋ ಆಗಿಹೋಗಿದೆ ಅಂತೇನಿಲ್ಲ. ನಮ್ಮಲ್ಲಿ ರಾಜ್ಯ, ರಾಷ್ಟ್ರ ಎಂದು ಭೇದ ಭಾವ ಇಲ್ಲ. ಪ್ರತಿಯೊಬ್ಬರೂ ಕಾರ್ಯಕರ್ತರಾಗಿಯೇ ಅವರವರ ಕೆಲಸ ಮಾಡುತ್ತಾರೆ. ಕೆಳ ಹಂತದಲ್ಲಿ ವೈಚಾರಿಕ, ವ್ಯಕ್ತಿಗತ ಭಿನ್ನಾಭಿಪ್ರಾಯಗಳಿರುತ್ತವೆ. ವೈಚಾರಿಕ, ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಒಗ್ಗೂಡಿಸಿದರೆ ಖಂಡಿತ ನಮಗೆ ಗೆಲುವು ಸಿಗುತ್ತದೆ ಎಂದು ಸಾವಂತ್ ಭಾಗಿ ವಿಚಾರವನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ : ಬಿಜೆಪಿಯೊಂದಿಗೆ ಮೈತ್ರಿಗೆ ಅಸಮಾಧಾನ; ಜೆಡಿಎಸ್ ಉಪಾಧ್ಯಕ್ಷ ಸೈಯದ್ ಶಫಿವುಲ್ಲಾ ರಾಜೀನಾಮೆ