ಬೆಂಗಳೂರು: ವಿಶ್ವಾಸಮತಯಾಚನೆಯಲ್ಲಿ ಗೆಲುವು ದಾಖಲಿಸಿಲಿರುವ ಬಿಎಸ್ ಯಡಿಯೂರಪ್ಪ ತಮ್ಮ ಮುಂದಿನ ನಡೆ ಬಗ್ಗೆ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಚರ್ಚೆ ಮಾಡಿ ಸರ್ಕಾರ ರಚನೆ ಮಾಡಲು ದಿನಾಂಕ ಫಿಕ್ಸ್ ಮಾಡುತ್ತೇನೆ ಎಂದಿದ್ದಾರೆ.
4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಸಜ್ಜಾಗಿರುವ ಬಿಎಸ್ವೈ, ಸದನದಲ್ಲಿ ವಿಶ್ವಾಸಮತಯಾಚನೆಯಲ್ಲಿ ಗೆಲುವು ದಾಖಲು ಮಾಡುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಕ್ಷದ ಹಿರಿಯ ಮುಖಂಡರೊಂದಿಗೆ ಮೊದಲು ಚರ್ಚೆ ನಡೆಸುವೆ. ಅದಾದ ಬಳಿಕ ರಾಜ್ಯಪಾಲರನ್ನ ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಅವಕಾಶ ನೀಡುವಂತೆ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. ಜತೆಗೆ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಭಾಗಿಯಾಗಲು ತೆರಳುತ್ತಿರುವುದಾಗಿ ಮಾಹಿತಿ ನೀಡಿದರು.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಬಿಎಸ್ ಯಡಿಯೂರಪ್ಪ ಗುರುವಾರದಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.