ಬೆಂಗಳೂರು: ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ವ್ಯಾಪಿಸಿದ್ದರೂ ನಾನು ಮಾತ್ರ ಈ ವಿಚಾರದಲ್ಲಿ ಸಾಕಷ್ಟು ಉಡಾಫೆ ಮಾಡುತ್ತಿದ್ದೆ ಹಾಗೂ ಈ ರೋಗವನ್ನು ಬಹಳ ತಾತ್ಸಾರದಿಂದ ನೋಡಿದ್ದೆ, ಆದರೆ ನನಗೆ ಕೊರೊನಾ ಬಂದ ಮೇಲೆಯೇ ಈ ರೋಗದ ಬಗ್ಗೆ ನನಗೆ ಅರಿವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಇಂದು ನಡೆದ ಸಂತಾಪ ಸೂಚಕ ಚರ್ಚೆಯಲ್ಲಿ ಸಚಿವ ಸುರೇಶ್ ಅಂಗಡಿ ಸಾವಿಗೆ ಕಂಬನಿ ಮಿಡಿದ ಡಿಕೆಶಿ, ಯಾವುದೇ ಅಭ್ಯಾಸ ಇಲ್ಲದೇ ಚೆನ್ನಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಸಾಯುತ್ತಾರೆ ಎಂದರೆ ನಿಜಕ್ಕೂ ದುರಾದೃಷ್ಟಕರ. ಯಮ ಯಾರ ಮೇಲೆಯೂ ಕರುಣೆ ತೋರುವುದಿಲ್ಲ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಕೊರೊನಾ ವಿಚಾರದಲ್ಲಿ ನಾನು ಸಹ ಉಡಾಫೆ ಮಾಡುತ್ತಿದ್ದೆ, ಆದರೆ ಆ ಖಾಯಿಲೆಯಿಂದ ಎದುರಿಸಿದ ಕಷ್ಟಗಳು, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿತು ಎಂದಿದ್ದಾರೆ.
ನನ್ನಲ್ಲಿ ಕೊರೊನಾ ಲಕ್ಷಣ ಕಂಡುಬಂದಾಗ ಆಸ್ಪತ್ರೆಗೆ ಹೋಗಿ ಬಂದಿದ್ದೆ, ತದನಂತರ ಮತ್ತೆ ಜ್ವರ ಬಂತು, ಇದಾದ ಬಳಿಕ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ನಮ್ಮ ಶಾಸಕಾಂಗ ಪಕ್ಷದ ನಾಯಕರೂ ಕೂಡ ಎಚ್ಚರವಹಿಸುವಂತೆ ಹೇಳುತ್ತಿದ್ದರು. ಆದರೆ, ನಾನು ಅವರ ಮಾತನ್ನು ಆ ಸಮಯದಲ್ಲಿ ನಿರ್ಲಕ್ಷಿಸುತ್ತಿದ್ದೆ ಎಂದು ಹೇಳಿದರು.
ಮನುಷ್ಯನಿಗೆ ಆರೋಗ್ಯವೆಂಬುದು ಅತ್ಯಂತ ಅವಶ್ಯಕವಾದುದು, ಪ್ರತಿಯೊಬ್ಬರೂ ಸಹ ತಮ್ಮ ಆರೋಗ್ಯದ ಬಗ್ಗೆ ಅತ್ಯಂತ ಕಾಳಜಿ ವಹಿಸುವುದು ಅತ್ಯಗತ್ಯ. ಜನ ಸಾಮನ್ಯರೂ ಸಹ ಕೊರೊನಾ ಬಗ್ಗೆ ಉಡಾಫೆ ಮಾಡದೇ ಅತ್ಯಂತ ಜಾಗೃತರಾಗಿ ಈ ರೋಗವನ್ನು ಹಿಮ್ಮಟ್ಟಿಸಬೇಕು ಎಂದು ಇದೇ ವೇಳೆ ಸಲಹೆ ನೀಡಿದರು.