ಬೆಂಗಳೂರು: ನಾನು ಕೆಪಿಸಿಸಿ ಅಧ್ಯಕ್ಷನಾಗಬೇಕೆಂದು ಪ್ರಯತ್ನಿಸಿದ್ದೆ, ಆದ್ರೆ ಅದಕ್ಕೆ ಕೆಲವರು ಒಪ್ಪಲಿಲ್ಲ. ಅದನ್ನು ನಾನು ಬಹಿರಂಗವಾಗಿ ಹೇಳುವುದಿಲ್ಲ. ನಾನು ಇದೇ ಪಕ್ಷದಲ್ಲಿ ಬೆಳೆದಿದ್ದೇನೆ, ಇಲ್ಲೇ ಇರುತ್ತೇನೆ, ಇಲ್ಲೇ ಸಾಯುತ್ತೇನೆ. ಮುಖ್ಯಮಂತ್ರಿ ಯಾರಾದ್ರೂ ಆಗಿ, ಮೊದಲು ಪಕ್ಷ ಅಧಿಕಾರಕ್ಕೆ ತನ್ನಿ ಎಂದು ಮಾಜಿ ಸಂಸದ ಕೆ. ಹೆಚ್. ಮುನಿಯಪ್ಪ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರ ಹಾಕಿದ್ದಾರೆ.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಕಾಂಗ್ರೆಸ್‌ನ 136ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ನಿಮ್ಮನ್ನು ನಂಬಿದೆ ಸಿದ್ದರಾಮಯ್ಯನವರೆ. ನೀವು ಶಿವಕುಮಾರ್ ಅವರನ್ನು ಜತೆಗೆ ಕರೆದುಕೊಂಡು ಹೋಗಿ. ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಯಾರಾದರೂ ಸಿಎಂ ಆಗಲಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದರೂ ಆಗಲಿ, ಪರಮೇಶ್ವರ್ ಅವರಾದರೂ ಆಗಲಿ. ಮೊದಲು ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದರು.
ಬುದ್ಧಿ ಇಲ್ಲದ ಕೆಲವರು ಸಿದ್ದರಾಮಯ್ಯ ಸಿಎಂ ಅಂತಾರೆ, ಡಿ.ಕೆ. ಶಿವಕುಮಾರ್ ಸಿಎಂ ಅಂತಾರೆ. ಇದಕ್ಕೆ ತೆರೆ ಎಳೆಯಿರಿ ಎಂದು ಸಲಹೆ ನೀಡಿದರು. ಐದು ವರ್ಷ ಸಿದ್ದರಾಮಯ್ಯ ಉತ್ತಮ ಆಡಳಿತ ನಡೆಸಿದರು. ಒಳ್ಳೆಯ ಯೋಜನೆಗಳನ್ನು ಕೊಟ್ಟಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಹೊಗಳಿದ ಮುನಿಯಪ್ಪ ಅಂತಹ ಆಡಳಿತ ಮತ್ತೆ ರಾಜ್ಯದಲ್ಲಿ ನೋಡಬೇಕು. ಮುಂದಿನ ಚುನಾವಣೆಯಲ್ಲಿ ಸಿಎಂ ಯಾರು ಬೇಕಾದರೂ ಆಗಲಿ. ಅದನ್ನು ಮುಂದೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾವು ಈಗ ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಕಟ್ಟಬೇಕು. ನಮಗೆ ಅಧಿಕಾರದ ಆಸೆ ಇಲ್ಲ. ನೀವು ಮುಂದೆ ಹೋಗಿ ನಾವು ನಿಮ್ಮ ಹಿಂದೆ ಬರುತ್ತೇವೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.
ಬಿಜೆಪಿ ರೀತಿ ಪ್ರಚಾರ ಮಾಡುತ್ತಿಲ್ಲ:
ನಮ್ಮ ಐಡಿಯಾಲಜಿ ಬಗ್ಗೆ ಮಾತನಾಡುತ್ತಿದ್ದೇವೆ. ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಬಿಜೆಪಿ ರೀತಿ ಪ್ರಚಾರ ಮಾಡುತ್ತಿಲ್ಲ. ಬಿಜೆಪಿ ಕೇಂದ್ರದಲ್ಲಿ ನಿರ್ಧಾರ ಮಾಡಿದರೆ ಕಾರ್ಯಕರ್ತರವರೆಗೆ ತಲುಪಿಸುತ್ತಾರೆ. ಆ ಕೆಲಸ ನಾವು ಮಾಡುತ್ತಿಲ್ಲ. ಅವರ ಕಾರ್ಯಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಕಾಂಗ್ರೆಸ್ನಲ್ಲಿ ಆ ಕೆಲಸ ಆಗಬೇಕು ಎಂದರು.
ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಿದ ಪಕ್ಷ ಕಾಂಗ್ರೆಸ್:
ನಾವು ಪ್ರತಿದಿನ ಬಿಜೆಪಿ ವಿರುದ್ದ ಹೋರಾಟ ಮಾಡಬೇಕಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರಷ್ಟೇ ಬಿಜೆಪಿ ವಿರುದ್ಧ ಹೋರಾಟ ಮಾಡಿದರೆ ಸಾಲದು. ಎಲ್ಲರೂ ಹೋರಾಟ ಮಾಡಬೇಕು. ರಾಜ್ಯದಲ್ಲಿ ಸಿದ್ದರಾಮಯ್ಯ ಒಬ್ಬರೇ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ವಿರೋಧವನ್ನು ಕಟ್ಟಿಕೊಂಡಿದ್ದಾರೆ ಎಂದರು.
ರಾಷ್ಟ್ರ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಒಬ್ಬರೇ ಮಾತನಾಡುತ್ತಿದ್ದಾರೆ. ಎಲ್ಲ ರಾಜ್ಯಗಳಲ್ಲೂ ಶಾಸಕಾಂಗ ಪಕ್ಷದ ನಾಯಕರು ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷರು ಮಾತನಾಡಿ ಹೋರಾಟ ನಡೆಸಿದರೆ ನರೇಂದ್ರ ಮೋದಿ ಸರ್ಕಾರ ತೆಗೆಯುವುದು ಕಷ್ಟವಲ್ಲ ಎಂದರು.
ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ನೀವು ಸರ್ವನಾಶ ಆಗುತ್ತೀರಿ:
ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ನೀವು ಸರ್ವನಾಶ ಆಗುತ್ತೀರಾ ಎಂದು ಮೋದಿ ವಿರುದ್ಧ ಜಿ.ಸಿ. ಚಂದ್ರಶೇಖರ್ ವಾಗ್ದಾಳಿ ನಡೆಸಿದರು. ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಮಾತನಾಡಿ, ಧರ್ಮ ಆಧರಿತ ದೇಶ ಮಾಡಲು ಬಿಜೆಪಿ ನಿರ್ಧಾರ ಮಾಡಿದೆ. ನಾವು ಎಲ್ಲ ಧರ್ಮ ಜಾತಿಗಳ ಪರ ಇದ್ದೇವೆ. ಲವ್ ಜಿಹಾದ್ ಕಾನೂನು ತರಲು ಬಿಜೆಪಿ ಹೊರಟಿದೆ. ಇದು ಸಂವಿಧಾನ ವಿರೋಧಿ ಕಾನೂನು. ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಇದು ನಡೆಯುತ್ತಿದೆ. ಇಂತಹ ಕಾನೂನುಗಳನ್ನು ನಾವು ಖಂಡಿಸಬೇಕು ಎಂದರು. ಇದು ಹಿಂದು ಮುಸ್ಲಿಮರ ನಡುವೆ ಕಂದಕ ಸೃಷ್ಟಿ ಮಾಡುವ ಕೆಲಸ. ಧರ್ಮ ಆಧಾರಿತ ಮತ್ತು ಲಿಂಗ ಆಧಾರಿತ ಸಮಾಜ ಕಟ್ಟಲು ಬಿಜೆಪಿ ಮುಂದಾಗಿದೆ ಎಂದು ಕಿಡಿಕಾರಿದರು.
ಓದಿ:ನಾನು ದನದ ಮಾಂಸ ತಿನ್ನುತ್ತೇನೆ, ನೀನು ಯಾವನಯ್ಯ ಕೇಳೋಕೆ : ಸಿದ್ದರಾಮಯ್ಯ
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ಅವಕಾಶ ನೀಡಬಾರದು. ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಮುಂದಾದರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ಕಾಂಗ್ರೆಸ್‌ನ ನೇಗಿಲನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೊರಬೇಕು ಎಂದರು. ಇಬ್ಬರು ಎತ್ತುಗಳಂತೆ ನೇಗಿಲು ಹೊತ್ತು ಪಕ್ಷ ಸಂಘಟಿಸಬೇಕು. ಈ ಮೂಲಕ ಕಾರ್ಯಕರ್ತರಿಗೆ ಉತ್ಸಾಹ ತುಂಬಬೇಕು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಇಬ್ಬರೂ ಶ್ರಮಿಸಬೇಕು ಎಂದು ಹೇಳಿದರು.