ಬೆಂಗಳೂರು :ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದರೂ ಸಚಿವ ಸ್ಥಾನ ಸಿಗದಿರುವುದಕ್ಕೆ ತೀವ್ರ ಬೇಸರಗೊಂಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಗಳಿಗೆ ತಿಳಿಸುವ ಮೂಲಕ ನೇರವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಆರ್.ಟಿ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಖಾಸಗಿ ನಿವಾಸಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿದರು. ಮುಖ್ಯಮಂತ್ರಿಗಳ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಶಿವಮೊಗ್ಗ ಪ್ರವಾಸಕ್ಕೆ ಸಿಎಂ ಆಗಮಿಸುತ್ತಿರುವ ಕುರಿತು ಮಾತುಕತೆ ನಡೆಯಿತು. ಇದರ ಜೊತೆಯಲ್ಲಿಯೇ ಸಚಿವ ಸಂಪುಟ ವಿಸ್ತರಣೆ ವಿಷಯದ ಕುರಿತು ಪ್ರಸ್ತಾಪವಾಯಿತು. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ವಿಷಯದಲ್ಲಿ ನಿರ್ಧಾರವಾಗಲಿದೆ ನಿಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆಗೆ ಈಶ್ವರಪ್ಪ ಅಸಹನೆಗೊಂಡರು. ಈ ವೇಳೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ ಇನ್ಮುಂದೆ ನನ್ನನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟವಾಗಿ ಸಿಎಂ ಗೆ ತಿಳಿಸಿದ್ದೇನೆ ಎಂದರು.
ಸಿಎಂ ಭೇಟಿ ಬಳಿಕ ಚಕ್ರವರ್ತಿ ಲೇಔಟ್ ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ರಾಜಕಾರಣದಲ್ಲಿ ಏನೇನು ಆಗುತ್ತದೆ ಅಂತಾ ಯಾರಿಗೂ ಗೊತ್ತಾಗಲ್ಲ, ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಳ್ಳುತ್ತಾನೆ ಅಂತಾ ಕನಸು ಬಿದ್ದಿತ್ತಾ? ಅವರು ಮಲಗಿದ್ದು ಒಂದು ಕಡೆ ಪತ್ರ ಸಿಕ್ಕಿದ್ದು ಮತ್ತೊಂದು ಕಡೆ ಆದರೂ ಈ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಬಂತು, ನಂತರ ಸಚಿವ ಸ್ಥಾನಕ್ಕೆ ನಾನು ರಾಜೀನಾಮೆಯನ್ನೂ ನೀಡಬೇಕಾಯಿತು ಎಂದರು.
ಅದೃಷ್ಟವಶಾತ್ ಈ ಪ್ರಕರಣದ ತನಿಖೆ ನಂತರ ಕ್ಲೀನ್ ಚಿಟ್ ಸಿಕ್ಕಿತು. ನಂತರ ಸಚಿವ ಸ್ಥಾನ ನೀಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು, ಆದರೆ ಏನೇನು ಸಮಸ್ಯೆಗಳಿದೆಯೋ ಗೊತ್ತಿಲ್ಲ. ಪಕ್ಷ ಮತ್ತು ಸರ್ಕಾರಕ್ಕೆ ಸಮಸ್ಯೆ ಮಾಡಲು ನಾನು ತಯಾರಿಲ್ಲ, ಮಂತ್ರಿ ಮಾಡುವ ಅವಶ್ಯಕತೆ ಇಲ್ಲ ಎಂದು ಕೂಡಾ ಸಿಎಂಗೆ ತಿಳಿಸಿ ಬಂದಿದ್ದೇನೆ. ನನ್ನ ಇನ್ನು ಮಂತ್ರಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದೇನೆ, ಕೆಲಸ ಮಾಡಲು ಮಂತ್ರಿಯೇ ಆಗಬೇಕು ಅಂತಾ ಏನೂ ಇಲ್ಲ ಅನೇಕ ಇಲಾಖೆಗಳನ್ನು ನಾನು ನೋಡಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.
ಸಿಡಿ ಪ್ರಕರಣದ ಬಗ್ಗೆ ಈಶ್ವರಪ್ಪ ಹೇಳೋದೇನು? : ಇನ್ನೂ ರಾಜ್ಯ ರಾಜಕೀಯದಲ್ಲಿ ಬೂದಿ ಮುಂಚಿರುವ ಕೆಂಡದಂತಿರುವ ಸಿಡಿ ಪ್ರಕರಣ ಸಾಕಷ್ಟು ಸುದ್ದಿಯಾಗಿದೆ.ಈ ಕುರಿತು ಮಾತನಾಡಿದ ಈಶ್ವರಪ್ಪ ಸಿಬಿಐ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒತ್ತಾಯ ಮಾಡಿದ್ದಾರೆ. ಪ್ರಕರಣದಲ್ಲಿ ಏನಿದೆ ಅನ್ನೋದು ತನಿಖೆಯಿಂದಲೇ ಹೊರಬರಬೇಕು. ಸಿಬಿಐ ತನಿಖೆಗೆ ಜಾರಕಿಹೊಳಿ ಅಪೇಕ್ಷೆ ಪಟ್ಟಿರುವುದರಿಂದ ತನಿಖೆ ಮಾಡುವುದು ಸೂಕ್ತ. ಇದು ಕರ್ನಾಟಕದ ರಾಜಕೀಯಕ್ಕೆ ಕಳಂಕವಾಗಿದೆ. ಮತ್ತೆ ಮತ್ತೆ ಇವರ ಮೇಲೆ ಅವರು, ಅವರ ಮೇಲೆ ಇವರು ಹೇಳುತ್ತಾ ಇರುವುದು ಸೂಕ್ತ ಅಲ್ಲ. ಇದನ್ನು ಒಮ್ಮೆ ಮುಗಿಸಿಬಿಡಲಿ, ರಮೇಶ್ ಜಾರಕಿಹೊಳಿ ಅಪೇಕ್ಷೆಪಟ್ಟಿರುವುದರಿಂದ ಸಿಬಿಐ ತನಿಖೆ ಮಾಡುವುದು ತಪ್ಪಲ್ಲ ಎಂದರು.
ಶಿವಮೊಗ್ಗದಲ್ಲಿ ಮತದಾರರಿಗೆ ಬಿಜೆಪಿ ಎಂಎಲ್ಸಿ ಆಯನೂರು ಮಂಜುನಾಥ್ ಪತ್ರ ವಿಚಾರ ಕುರಿತು ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು. ಆಯನೂರು ಮಂಜುನಾಥ್ ಚುನಾವಣೆಗೆ ಅಭ್ಯರ್ಥಿಯಾಗಲು ಅಪೇಕ್ಷೆ ಪಡುವುದು ತಪ್ಪಲ್ಲ, ಬಿಜೆಪಿಗೆ ಕಾರ್ಯಕರ್ತರಿಗೆ ಚುನಾವಣೆಗೆ ಸ್ಫರ್ಧೆ ಮಾಡುವುದೇ ತಪ್ಪು ಅಂತಾ ಹೇಳಿದರೆ ಚುನಾವಣೆಗೆ ಬಿಜೆಪಿ ರೆಡಿ ಇಲ್ಲ ಅಂತಾ ಆಗುತ್ತದೆ, ಪಕ್ಷ ಯಾರಿಗೆ ತೀರ್ಮಾನ ಮಾಡುತ್ತದೋ ಅವರಿಗೆ ಟಿಕೆಟ್ ಸಿಗುತ್ತದೆ ಎಂದರು.
’ಶಿವಮೊಗ್ಗ ತಣ್ಣಗಿದೆ, ಅದಕ್ಕೆ ಬೆಂಕಿ ಹಚ್ಚವ ಪ್ರಯತ್ನ ಬೇಡ’- ಈಶ್ವರಪ್ಪ :ಶಿವಮೊಗ್ಗದಲ್ಲಿ ಶಾಂತಿ ನೆಲೆಸಬೇಕು ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಹರ್ಷನ ಕೊಲೆಯಾಗಿದ್ದಕ್ಕೆ ಬಿಜೆಪಿ ಕಾರ್ಯಕರ್ತರು, ಹಿಂದೂಗಳು ಸುಮ್ಮನೆ ಕುಳಿತುಕೊಳ್ಳಬೇಕಾ ಅಂತಾ ಡಿ.ಕೆ. ಶಿವಕುಮಾರ್ ಉತ್ತರ ಕೊಟ್ಟು ಬಿಡಲಿ ಎಂದು ಟಾಂಗ್ ಕೊಟ್ಟರು. ಪಿಎಫ್ಐ ಗೂಂಡಾ ಕೊಲೆ ಮಾಡಿದ ಬಳಿಕವೂ ಅದನ್ನು ಖಂಡಿಸುವ ಪ್ರಯತ್ನವನ್ನೂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮಾಡಲಿಲ್ಲ. ಆದರೆ ಹಿಂದೂ ಕೊಲೆ ನಡೆದರೆ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ನವರಿಗೆ ಖುಷಿ, ಮುಸಲ್ಮಾನ ಕೊಲೆ ಆದರೆ ಬಿಜೆಪಿ ಕಾರ್ಯಕರ್ತರ ಮೇಲೆ ಆಪಾದನೆ ಮಾಡುತ್ತಾರೆ. ಶಿವಮೊಗ್ಗ ತಣ್ಣಗಿದೆ, ಅದಕ್ಕೆ ಬೆಂಕಿ ಹಚ್ಚಲು ಡಿ.ಕೆ. ಶಿವಕುಮಾರ್ ಪ್ರಯತ್ನ ಮಾಡಬಾರದು ಎಂದು ಗುಡುಗಿದರು.
ಡಿ.ಕೆ. ಶಿವಕುಮಾರ್ ಪ್ರತ್ಯೇಕ ಬಸ್ ಯಾತ್ರೆ ಆರಂಭಿಸುತ್ತಿದ್ದಾರೆ. ಅವರು ನಾನು ತಿಹಾರ್ ಜೈಲಿಗೆ ಯಾಕೆ ಹೋಗಿದ್ದೆ, ಯಾವ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಮಾಡಿದ್ದೆ, ಯಾಕೆ ಇಡಿ ಕೇಸ್ ಹಾಕಿದ್ದು, ಹೇಗೆ ಕಂತೆ ಕಂತೆ ನೋಟು ಸಿಕ್ಕಿತು ಅಂತಾ ವಿವರಿಸಿ 224 ಕ್ಷೇತ್ರದಲ್ಲಿ ಭಾಷಣ ಶುರು ಮಾಡಲಿ ಎಂದು ವ್ಯಂಗ್ಯವಾಡಿದರು.
ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಪಾತ್ರ: ಮುಂಬರುವ ಚುನಾವಣೆಗೆ ಸಾಮೂಹಿಕ ನಾಯಕತ್ವ ಅಂತಾ ಸ್ಪಷ್ಟವಾಗಿ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಸಿಎಂ ಬೊಮ್ಮಾಯಿ, ವರಿಷ್ಠರು ಹೇಳಿದ್ದಾರೆ. ಬಿಜೆಪಿ ಚಾಣಕ್ಯನ ತಂತ್ರ ಮಾಡಿ ರಾಜಕಾರಣ ಮಾಡುತ್ತದೆ ತಂತ್ರಗಾರಿಕೆ ಎನ್ನುವುದು ಬಿಜೆಪಿ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಪೇಜ್ ಪ್ರಮುಖ್ ಅಂದರೆ ಏನು ಅಂತಾ ಕಾಂಗ್ರೆಸ್ ನವರಿಗೆ ಗೊತ್ತಾ ಕೇಳಿ, ಸಂಘಟನಾತ್ಮಕವಾಗಿ ಒಂದೊಂದು ಬಾರಿ ಒಂದೊಂದು ರೀತಿ ತಂತ್ರಗಾರಿಕೆ ಮಾಡುತ್ತೇವೆ ಎಂದರು.
ಕರ್ನಾಟಕದಲ್ಲಿನ ಚುನಾವಣೆಗೆ ಗುಜರಾತ್ ಮಾಡೆಲ್ ಬಳಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಗುಜರಾತ್ ನಲ್ಲಿ ಗೆದ್ದ ಮೇಲೆ ತಾನೇ ಗೊತ್ತಾಗಿದ್ದು ಗುಜರಾತ್ ಮಾಡೆಲ್ ಏನು ಅಂತಾ, ಕರ್ನಾಟಕದಲ್ಲಿ ಗೆದ್ದ ಮೇಲೆ ಕರ್ನಾಟಕದ ಮಾಡೆಲ್ ಏನು ಅಂತಾ ಗೊತ್ತಾಗುತ್ತದೆ ನಂತರ ಬೇರೆ ರಾಜ್ಯಗಳು ಅನುಸರಿಸುವ ಕೆಲಸ ಆಗಬಹುದು ಕರ್ನಾಟಕಕ್ಕೆ ಕರ್ನಾಟಕ ಮಾಡೆಲ್ ಎಂದರು.
ಇದನ್ನೂ ಓದಿ :ಸಿಡಿ ರಾಜಕಾರಣ ರಾಜಕೀಯಕ್ಕೆ ಕಳಂಕ: ಕೆ.ಎಸ್.ಈಶ್ವರಪ್ಪ