ಬೆಂಗಳೂರು: ಮೈ ಶುಗರ್ ಕಾರ್ಖಾನೆ ವಿಚಾರವನ್ನು ನಾವು ಸೆನ್ಸೆಷನಲ್ ಮಾಡಲು ಹೊರಟಿದ್ದೇವೆ ಎಂದೆನಿಸುತ್ತಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಮ್ಮ ಒಳಗೊಳ್ಳುವಿಕೆ ಏನೂ ಇರಲ್ಲ, ಅದು ನಮಗೆ ಸಂಬಂಧವೂ ಇಲ್ಲ. ನಮ್ಮ ಸಂಬಂಧಪಟ್ಟವರಿಗೆ ಟೆಂಡರ್ನಲ್ಲಿ ಆಸಕ್ತಿ ಇದೆ ಎನ್ನುವುದು ಹಾಸ್ಯಾಸ್ಪದ ಹಾಗೂ ಕೆಳಮಟ್ಟದ ಹೇಳಿಕೆ ಎಂದು, ರಾಜಕೀಯ ವಿರೋಧಿಗಳಿಗೆ ಮಂಡ್ಯ ಸಂಸದೆ ಸುಮಲತಾ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಮಂಡ್ಯ ಸಂಸದೆ ಸುಮಲತಾ ಭೇಟಿ ನೀಡಿದರು. ರೈತರ ನಿಯೋಗದ ಜೊತೆ ಆಗಮಿಸಿ ಮೈ ಶುಗರ್ ಕಾರ್ಖಾನೆ ಆರಂಭ ಕುರಿತು ಸಿಎಂ ಜೊತೆ ಸಮಾಲೋಚನೆ ನಡೆಸಿದರು. ಕಾರ್ಖಾನೆ ಆರಂಭದಿಂದ ಮಾತ್ರವೇ ಅಲ್ಲಿ ಕಬ್ಬು ಬೆಳೆಯುವ ರೈತರಿಗೆ ಅನುಕೂಲ ಸಾಧ್ಯ, ಹಾಗಾಗಿ ಆದಷ್ಟು ಬೇಗ ಕಾರ್ಖಾನೆ ಆರಂಭಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ,ಮೈಶುಗರ್ ಸಕ್ಕರೆ ಕಾರ್ಖಾನೆ ಆರಂಭ ಕುರಿತು ಹಿಂದೆ ಓನರ್ ಶಿಪ್ ಮತ್ತು ಮ್ಯಾನೇಜ್ಮೆಂಟ್ ಮಾದರಿಯಲ್ಲಿ ಆರಂಭ ಮಾಡುವುದಾಗಿ ಹೇಳಿದ್ದರು, ಯಾವ ರೀತಿ ಆದರೂ ಸರಿ ಕಾರ್ಖಾನೆ ಪ್ರಾರಂಭವಾಗಬೇಕು ಎಂದು ಹೇಳಿದ್ದೇವೆ. ಸರ್ಕಾರ ಕಾರ್ಖಾನೆಗೆ ನಷ್ಟವಾಗದ ರೀತಿಯಲ್ಲಿ ಓ ಅಂಡ್ ಎಂ ಮಾದರಿಯಲ್ಲಿ ಪ್ರಾರಂಭ ಮಾಡೋಕೆ ಹೇಳಿದ್ದೇವೆ. ರೈತರಿಗೆ ಕಾರ್ಖಾನೆ ಆರಂಭವಾಗುವುದು ಮುಖ್ಯ ಅದೇ ನಮ್ಮ ಅಜೆಂಡಾ ಎಂದರು.
ಸರ್ಕಾರದಿಂದ ಕಾರ್ಖಾನೆ ನಡೆಸಲು ಸಾಧ್ಯವಿಲ್ಲ ಎಂದು ಸಿಎಂ ಧೃಢವಾಗಿ ಹೇಳಿದ್ದಾರೆ. ಹಿಂದೆ ಕೋಟಿಗಟ್ಟಲೆ ಹಣ ಹಾಕಿದಾಗ ಅದು ಎಲ್ಲೋಯ್ತು ಯಾರಿಗೂ ಗೊತ್ತಿಲ್ಲ. ಭ್ರಷ್ಟಾಚಾರ ಆಗಿದೆ, ದುರುಪಯೋಗ ಅಗಿದೆ, ಅಧಿಕಾರಿಗಳ ನಿರ್ಲಕ್ಷ್ಯವೂ ಇದೆ. ಖಾಸಗೀಕರಣ ಬೇಡ ಅಂದಾಗ ಓ ಅಂಡ್ ಎಂ ಒಂದೇ ದಾರಿ ಎಂಬುದು ಸರ್ಕಾರದ ಅಭಿಪ್ರಾಯ, ಅದಕ್ಕೆ ಒತ್ತುಕೊಟ್ಟು ಮಾಡಿ ಎಂಬ ಬೇಡಿಕೆ ಇಟ್ಟಿದ್ದೇವೆ. ಓ ಅಂಡ್ ಎಂ ಕೂಡಾ ಬೇಡ ಅಂತಾದರೇ ಹೀಗೆಯೇ ಬಿಟ್ಟು ಬಿಡುತ್ತೇವೆ ಎಂದು ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.
ಓ ಅಂಡ್ ಎಂಗೆ ನಿಮ್ಮೆಲ್ಲರ ಒಪ್ಪಿಗೆ ಆದರೆ ತಕ್ಷಣ ಕ್ಯಾಬಿನೆಟ್ನಲ್ಲಿ ಇರಿಸಿ ನಿರ್ಧಾರ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಮೈಶುಗರ್ ಕಾರ್ಖಾನೆ ವಿಚಾರವನ್ನು ನಾವು ಸೆನ್ಸೆಷನಲ್ ಮಾಡಲು ಹೋಗುತ್ತಿದ್ದೇವಾ ಎಂದು ಅನ್ನಿಸುತ್ತಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಮ್ಮ ಒಳಗೊಳ್ಳುವಿಕೆ ಏನೂ ಇರಲ್ಲ ಅದು ನಮಗೆ ಸಂಬಂಧವೂ ಇಲ್ಲ. ನಮಗೆ ಸಂಬಂಧಪಟ್ಟವರಿಗೆ ಟೆಂಡರ್ನಲ್ಲಿ ಆಸಕ್ತಿ ಇದೆ ಎನ್ನುವುದು ಹಾಸ್ಯಾಸ್ಪದ, ಕೆಳಮಟ್ಟದ ಹೇಳಿಕೆ, ಯಾವಾಗ ಕಾರ್ಖಾನೆ ಆರಂಭವಾಗುತ್ತದೋ ಅಲ್ಲಿಗೆ ನಮ್ಮ ಜವಾಬ್ದಾರಿ ಮುಗಿಯುತ್ತದೆ ಎಂದರು.