ಬೆಂಗಳೂರು: ಅಕ್ರಮ ಮರಳುಗಾರಿಕೆ ವಿಚಾರವಾಗಿ ನಾನು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಗಣಿ ಹಾಗೂ ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಮರಳುಗಾರಿಕೆ ಸಂಬಂಧ ಈವರೆಗೆ ನಾನು ಯಾವುದೇ ಒತ್ತಡಕ್ಕೆ ಮಣಿದಿಲ್ಲ. ಇದು ನನ್ನ ಭರವಸೆ. ಗಣಿ ಸಚಿವನಾಗಿರುವ ತನಕ ನಾನು ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತೆಲಂಗಾಣ ಮಾದರಿ ಮರಳು ನೀತಿ ಜಾರಿಗೆ ಚಿಂತನೆ ಇದೆ. ಅಲ್ಲಿನ ಮರಳು ನೀತಿ ಚೆನ್ನಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಅದಕ್ಕಾಗಿ ಅಲ್ಲಿಗೆ ಅಧಿಕಾರಿಗಳ ತಂಡ ಕಳುಹಿಸಲಾಗಿದೆ. ಅಲ್ಲಿನ ಮರಳು ನೀತಿ ಅಧ್ಯಯನ ನಡೆಸಿ ಸಿಎಂ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ನಾನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದಿಲ್ಲ. ಅಕ್ರಮ ಮರಳುಗಾರಿಕೆ ತಡೆಯಲು ಎಲ್ಲಾ ಸಾಧ್ಯತೆ ಇರುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಯಾವುದೇ ರಾಜಕೀಯ ಒತ್ತಡಗಳಿಗೆ ನಮ್ಮ ಇಲಾಖೆ ಅಧಿಕಾರಿಗಳು ಭಯ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದರು.
ಮಲೇಷ್ಯಾ ಮರಳು ಸಂಬಂಧ ಚರ್ಚೆ: ಹಿಂದಿನ ಸರ್ಕಾರ ಮಲೇಷ್ಯಾ ಮರಳನ್ನು ಆಮದು ಮಾಡಲಾಗಿದೆ. ಈ ಸಂಬಂಧ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ, ಅದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು. ಮಲೇಷ್ಯಾ ಮರಳು ಸಂಬಂಧ ಏನಾದರೂ ಅವ್ಯವಹಾರ ಆಗಿದ್ದರೆ ಅಧ್ಯಯನ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಹಿಂದಿನ ಸರ್ಕಾರ ಇದ್ದಾಗ ಆಮದು ಮರಳು ಬಗ್ಗೆ ಸಾಕಷ್ಟು ವಾದ-ವಿವಾದ ಆಗಿತ್ತು. ಅಧಿವೇಶನದಲ್ಲೂ ಚರ್ಚೆ ಆಗಿತ್ತು. ಈ ಸಂಬಂಧ ಸಿಎಂ ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.