ಬೆಂಗಳೂರು: ಪಕ್ಷವನ್ನು ನಾನೊಬ್ಬನೇ ಅಧಿಕಾರಕ್ಕೆ ತಂದಿರುವುದಾಗಿ ಯಾವತ್ತೂ ಹೇಳಿಲ್ಲ, ಹೇಳುವುದೂ ಇಲ್ಲ. ಕಾರ್ಯಕರ್ತರು ಹಾಗೂ ಜನ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದರು.
ಶಿವಕುಮಾರ್ ಒಬ್ಬರೇ ಪಕ್ಷವನ್ನು ಅಧಿಕಾರಕ್ಕೆ ತಂದಿಲ್ಲ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷದ ಕಾರ್ಯಕರ್ತರು, ನಾವು, ನೀವು ಸೇರಿ, ರಾಜ್ಯದ ಜನರು, ಪ್ರತಿ ಹಳ್ಳಿಯಲ್ಲಿರುವವರು ಬಡಿದಾಡಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಡಿ.ಕೆ. ಶಿವಕುಮಾರ್ ಒಬ್ಬನೇ ಅಧಿಕಾರಕ್ಕೆ ತಂದಿದ್ದಾನೆ ಎಂದು ಇಂದಾಗಲಿ, ನಾಳೆಯಾಗಲಿ, ಎಂದಿಗೂ, ಯಾವತ್ತಿಗೂ ಹೇಳುವುದಿಲ್ಲ ಎಂದರು.
ಎರಡೂವರೆ ವರ್ಷಗಳ ನಂತರ ಸಚಿವ ಸಂಪುಟ ಪುನಾರಚನೆ ಆಗುತ್ತದೆ ಎಂದು ಚೀಫ್ ವಿಪ್ ಅಶೋಕ್ ಪಟ್ಟಣ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಆಂತರಿಕವಾಗಿ ಒಂದಷ್ಟು ವಿಚಾರಗಳು ಚರ್ಚೆಯಾಗಿರುತ್ತವೆ. ಅದನ್ನು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಅದನ್ನು ಚರ್ಚೆ ಮಾಡಲು ನಾನು ಹೋಗುವುದಿಲ್ಲ, ನನಗೆ ಇರುವ ಮಾಹಿತಿ ಪ್ರಕಾರ ಆ ರೀತಿ ಚರ್ಚೆ ನಡೆದಿಲ್ಲ ಎಂದು ಹೇಳಿದರು.
ಜಾರಕಿಹೊಳಿ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಇತ್ತೀಚೆಗೆ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಜನರಿಗೆ ನಾನು ಸಿಎಂ ಆಗಬೇಕು ಎನ್ನುವ ಆಸೆ, ಬಯಕೆ ಇದ್ದೇ ಇರುತ್ತದೆ. ಅದು ನಂತರದ ವಿಷಯ ಆದರೆ, ನಾನು ನಮ್ಮ ಪಕ್ಷ ತೆಗೆದುಕೊಳ್ಳುವ ನಿರ್ಧಾಕ್ಕೆ ಬದ್ಧ ಎಂದು ಹೇಳಿದ್ದರು.
ನನ್ನ ಹಾಗೂ ಡಿ ಕೆ ಶಿವಕುಮಾರ್ ನಡುವೆ ಆಂತರಿಕ ಭಿನ್ನಾಭಿಪ್ರಾಯ ಇದೆ ಹೊರತು ಬಹಿರಂಗ ಭಿನ್ನಾಭಿಪ್ರಾಯ ಇಲ್ಲ ಎನ್ನುವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಡಿಕೆಶಿ ಯಾವ ಆಂತರಿಕನೂ ಇಲ್ಲ, ಮತ್ತೊಂದೂ ಇಲ್ಲ. ನನಗೆ ಯಾರ ಬಗ್ಗೆಯೂ ಭಿನ್ನಾಭಿಪ್ರಾಯ ಇಲ್ಲ. ಸತೀಶ್ ಜಾರಕಿಹೊಳಿ ಮಾತ್ರವಲ್ಲ ನನಗೆ ಯಾರ ಮೇಲೆಯೂ ಭಿನ್ನಾಭಿಪ್ರಾಯ ಇಲ್ಲ. ಯಾಕೆ ಭಿನ್ನಾಭಿಪ್ರಾಯ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.
ನಂತರ ಡಿಕೆಶಿ ಬೆಳಗಾವಿ ಭೇಟಿ ಸಂದರ್ಭ ತಾವು ಗೈರಾಗಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ, ಕಳೆದ ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ಹಸ್ತಕ್ಷೇಪ ಆಗಿದೆ. ನನ್ನ ಮೌನ ದೌರ್ಬಲ್ಯವಲ್ಲ ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.
ವರ್ಗಾವಣೆ ವಿಚಾರವಾಗಿ ಹಸ್ತಕ್ಷೇಪವಾಗಿದೆ. ಹಲವಾರು ಬಾರಿ ನಾನು ಕಾಂಪ್ರಮೈಸ್ ಮಾಡಿಕೊಂಡಿದ್ದೇನೆ. ಪಕ್ಷದ ದೃಷ್ಟಿಯಿಂದ ನಾನು ಹೊಂದಿಕೊಂಡು ಹೋಗುತ್ತಿದ್ದೇನೆ. ಕಳೆದ 30 ವರ್ಷಗಳಿಂದ ರಾಜಕೀಯದಲ್ಲಿದ್ದು ಸಕ್ಸಸ್ ಆಗಿದ್ದೇನೆ. ನನ್ನ ಮೌನ ದೌರ್ಬಲ್ಯ ಅಲ್ಲವೇ ಅಲ್ಲ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಕ್ಷೇತ್ರದಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲ: ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ