ಬೆಂಗಳೂರು: ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್ ವ್ಯವಹಾರವನ್ನು ಹಿಂದೆಯೂ ವಿರೋಧಿಸಿದ್ದೆ, ಈಗಲೂ ವಿರೋಧಿಸುತ್ತಿದ್ದೇನೆ. ಇದಕ್ಕಾಗಿಯೇ ಆತ ನನಗೆ ಅಭಿನಂದನೆ ಸಲ್ಲಿಸಿದ್ದ ಎಂದು ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ತಿಳಿಸಿದ್ದಾರೆ.
ಈಟಿವಿ ಭಾರತ್ ಪ್ರತಿನಿಧಿ ಜೊತೆ ಮಾತನಾಡಿ, ಮನ್ಸೂರ್ನಿಂದ ಅಮಾಯಕರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಿದ್ದು, ಇಲ್ಲಿ ನಿಷ್ಪಕ್ಷಪಾತ ತನಿಖೆ ಆಗುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ಸರ್ಕಾರಕ್ಕೆ ತನಿಖೆಯನ್ನು ಬೇಗ ಮುಗಿಸುವಂತೆ ಮನವಿ ಮಾಡಿದ್ದು, ಅಗತ್ಯ ಬಂದರೆ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.
ಐಎಂಎ ವ್ಯವಹಾರವನ್ನು ಮೊದಲಿಂದಲೂ ವಿರೋಧಿಸಿದ್ದೆ. ಜನಜಾಗೃತಿ ಕೂಡ ಮೂಡಿಸಿದ್ದೆ. ಅವರು ತೆರಳುವ ಮಾರ್ಗ ಸರಿ ಇಲ್ಲ ಅಂತ ತಮ್ಮ ಬಳಿ ಬಂದವರಿಗೆಲ್ಲಾ ಹೇಳಿದ್ದೆವು. ಅವನು ಅನುಕಂಪ ಗಿಟ್ಟಿಸಲು ಗಣ್ಯರ ಹೆಸರು ಬಳಸಿಕೊಳ್ಳುತ್ತಿದ್ದಾನೆ. ಸಮುದಾಯದ ಜನ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿ ನಷ್ಟಕ್ಕೊಳಗಾಗಿದ್ದಾರೆ ಎಂದು ತಿಳಿಸಿದರು.
ಸಮಾಜದ ರಾಜಕಾರಣಿಗಳು, ಹಿರಿಯರು ಹಾಗೂ ಗಣ್ಯರಿಂದ ನ್ಯಾಯ ಒದಗಿಸಲಾಗದು. ಮನ್ಸೂರ್ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಆದಷ್ಟು ಬೇಗ ಅಮಾಯಕರ ಹಣ ವಾಪಸ್ ಕೊಡಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಬಹುದಷ್ಟೇ. ಯಾವುದೇ ತನಿಖಾ ಸಂಸ್ಥೆಗೆ ವಹಿಸಲಿ, ಪ್ರಾಮಾಣಿಕ ತನಿಖೆ ಆಗಬೇಕೆಂಬುದಷ್ಟೇ ನಮ್ಮ ಆಶಯ ಎಂದರು.