ಬೆಂಗಳೂರು: ಧರ್ಮೇಗೌಡರ ಆತ್ಮಹತ್ಯೆಯಿಂದ ಆಘಾತವಾಗಿದ್ದು, ಈ ಬಗ್ಗೆ ತನಿಖೆಯಾಗಲಿ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಧರ್ಮೇಗೌಡರ ಸಾವಿನಿಂದ ತುಂಬಾ ದುಃಖವಾಗಿದೆ. ಮೊನ್ನೆಯೂ ಅವರ ಕಚೇರಿಗೆ ಭೇಟಿ ಕೊಟ್ಟಿದ್ದೆವು. ಅವಿಶ್ವಾಸ ವಿಚಾರದಲ್ಲಿ ಸಹಿ ಮಾಡಿಸಿಕೊಂಡಿದ್ದೆವು. ಸಿ.ಟಿ.ರವಿಯವರ ಜೊತೆ ನಾನು ಮಾತನಾಡಿದೆ. ಪರಿಷತ್ ಗದ್ದಲ ನೋವು ತಂದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರ ಡೆತ್ ನೋಟ್ನಲ್ಲಿ ಬರೆಯಲಾಗಿದೆಯಂತೆ ಎಂದರು.
ಕಾರಣ ಏನೇ ಇರಲಿ, ರಾಜಕೀಯದಲ್ಲಿ ಗುರುತಿಸಿಕೊಂಡಿದ್ದವರು. ಹೋರಾಟದ ಮೂಲಕವೇ ಮೇಲೆ ಬಂದವರು. ಅವರು ಯಾಕೆ ಹೀಗೆ ಮಾಡಿಕೊಂಡ್ರು ಗೊತ್ತಿಲ್ಲ. ಹೀಗಾಗಿ ಅವರು ಡಿಪ್ರೆಸ್ ಆಗಿರಬಹುದು. ಅವರ ಸಾವು ನಿಜಕ್ಕೂ ದುಃಖ ತಂದಿದೆ. ದೇವರು ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.
ಓದಿ: ಧರ್ಮೇಗೌಡ ಸಾವಿನ ಬಗ್ಗೆ ತನಿಖೆ ಆಗಬೇಕು : ಮಾಜಿ ಸ್ಪೀಕರ್ ಬೋಪಯ್ಯ
ಅವರನ್ನು ಯಾರು ಎಳೆದಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮಾಧ್ಯಮಗಳಲ್ಲೂ ಸುದ್ದಿಯಾಗಿದೆ. ಅದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಾವೇನು ಅವರನ್ನು ಬಲವಂತವಾಗಿ ಕೂರಿಸಿಲ್ಲ. ರಾಜಕಾರಣಿಯನ್ನು ಬಲವಂತವಾಗಿ ಕೂರಿಸಲು ಸಾಧ್ಯವಿಲ್ಲ. ಬಲವಂತವಾಗಿ ಯಾರೂ ಕೂರಿಸಿಲ್ಲ. ಅವರೇ ಹೋಗಿ ಚೇರ್ ಮೇಲೆ ಕೂತಿದ್ದರು. ಚೇರ್ ಮೇಲೆ ಕೂರಿಸೋಕೆ ಯಾರೂ ಮುಂದಾಗಿಲ್ಲ. ರೆಕಾರ್ಡ್ ನಲ್ಲೇ ಎಲ್ಲವೂ ಇದೆ. ಎಲ್ಲದರ ಬಗ್ಗೆಯೂ ತನಿಖೆಯಾಗಲಿ ಎಂದು ತಿಳಿಸಿದರು.