ಬೆಂಗಳೂರು: ಮೂರು ದಿನಗಳ ಕಾಲ ದೆಹಲಿಯಲ್ಲಿದ್ದರೂ ಹೈಕಮಾಂಡ್ ನಾಯಕರ ಭೇಟಿ ಸಾಧ್ಯವಾಗಲಿಲ್ಲ. ಪಂಚ ರಾಜ್ಯಗಳ ಚುನಾವಣಾ ವಿಚಾರದಲ್ಲಿ ವರಿಷ್ಠರು ಬಿಡುವಿಲ್ಲದ ಚಟುವಟಿಕೆಯಲ್ಲಿದ್ದಾರೆ. ಈ ಬಗ್ಗೆ ಖಂಡಿತವಾಗಿಯೂ ನನಗೆ ಬೇಸರ ಇಲ್ಲ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹೇಳಿದರು.
ಸಂಜಯನಗರ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ದೆಹಲಿಗೆ ಹೋದಾಗ ಹೈಕಮಾಂಡ್ ಭೇಟಿ ಸಾಧ್ಯವಾಗಲಿಲ್ಲ. ನಾವು ಪಕ್ಷದ ವ್ಯವಸ್ಥೆಗೆ ಪೂರಕವಾಗಿರಬೇಕು, ಎಲ್ಲವನ್ನೂ ಸಹಿಸಿಕೊಳ್ಳಬೇಕು. ವಕ್ರದೃಷ್ಟಿಯಿಂದ ನೋಡಬಾರದು. ನಮ್ಮ ನಾಯಕರು ಸತತವಾಗಿ ಸಭೆಗಳಲ್ಲಿ ಬ್ಯುಸಿ ಆಗಿದ್ದರು. ರಾತ್ರಿ 11 ಗಂಟೆವರೆಗೂ ನಡ್ಡಾ ಅವರು ಬೇರೆ ಬೇರೆ ರಾಜ್ಯಗಳ ಜೊತೆ ಸಭೆಯಲ್ಲಿ ಇದ್ದರು. ಇವತ್ತು ಉಳಿಯಲು ಹೇಳಿದ್ದರು, ಆದರೆ ನಾನು ತಮಿಳುನಾಡಿಗೆ ಹೋಗಬೇಕಿತ್ತು. ಹಾಗಾಗಿ ಬೆಂಗಳೂರಿಗೆ ಹೊರಟು ಬಂದೆ. ಅವರೇ ತಮಿಳುನಾಡಿಗೆ ಹೋಗಲು ಆದೇಶ ಮಾಡಿದ್ದರು. ಇವತ್ತು ತಮಿಳುನಾಡಿಗೆ ಹೋಗುತ್ತಿದ್ದೇನೆ ಎಂದರು.
ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಲು ಮುಂದಾದಲ್ಲಿ ಆಮರಣಾಂತ ಉಪವಾಸ ಹೋರಾಟ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಮಗೆ ಇನ್ನೂ ಇದರ ಬಗ್ಗೆ ಯಾವುದೇ ಸಂದೇಶ ಬಂದಿಲ್ಲ. ಬಂದಾಗ ಪಕ್ಷದಲ್ಲಿ ಚರ್ಚಿಸುತ್ತೇವೆ. ಕುಮಾರಸ್ವಾಮಿ ಹೋರಾಟದ ಬಗ್ಗೆ ಅವರ ಬಳಿಯೇ ಕೇಳಿ ಎಂದು ಹೇಳಿದರು.
ಕರ್ನಾಟಕದ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಇದೆ. ಸರ್ಕಾರವು ರೈತರಿಗೆ ಸಹಕಾರ ಕೊಡುತ್ತಿಲ್ಲ. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ವಿರೋಧಿಗಳನ್ನು ಯಾವ ರೀತಿಯಲ್ಲಿ ಬೇಕಾದರೂ ತೆಗೆದುಕೊಂಡು ಹೋಗುವ ಪರಿಸ್ಥಿತಿ ಅವರದ್ದು. ಅವರಲ್ಲಿ ಆಂತರಿಕ ಕಚ್ಚಾಟ ಶುರುವಾಗಿದೆ. ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರಿಂದ ಆಂತರಿಕ ಕಚ್ಚಾಟವಾಗುತ್ತಿದೆ. ಆಡಳಿತಕ್ಕೆ ಬಂದ ಇಷ್ಟು ದಿನದಲ್ಲೇ ಭ್ರಷ್ಟಾಚಾರ ಹೆಚ್ಚಾಗಿದೆ. ಇದೆಲ್ಲವನ್ನೂ ರಾಷ್ಟ್ರೀಯ ನಾಯಕರ ಗಮನಕ್ಕೆ ತರಬೇಕಿದೆ. ಜನರಿಗೆ ತಿಳಿಸಲು ಕೂಡಾ ಇದು ಅತ್ಯಂತ ಸಕಾಲ. ಈ ಸಂಬಂಧ ದೆಹಲಿಗೆ ಹೋಗುತ್ತೇನೆ ಎಂದು ಅ.23 ರಂದು ಸದಾನಂದ ಗೌಡ ತಿಳಿಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಲು ನಾಳೆ ದೆಹಲಿ ಪ್ರವಾಸ: ಸದಾನಂದಗೌಡ