ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ನಾನಿಲ್ಲ. ಪಕ್ಷದ ವರಿಷ್ಠರ ತೀರ್ಮಾನದಂತೆ ನಾವೆಲ್ಲರೂ ಮುನ್ನಡೆಯಲಿದ್ದೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.
ಚಿತ್ರಕಲಾ ಪರಿಷತ್ನಲ್ಲಿ ಆಯೋಜಿಸಿರುವ ಬೆಂಗಳೂರು ಉತ್ಸವ ಉದ್ಘಾಟಿಸಿದರು. ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ್ ಜೊತೆಗೂಡಿ ಕರಕುಶಲ ವಸ್ತುಗಳು, ಸೀರೆ ಮಳಿಗೆಗಳನ್ನು ವೀಕ್ಷಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ನಮ್ಮ ಸಂಘಟನೆಯಲ್ಲಿ ಬದಲಾವಣೆ ನಿರಂತರವಾಗಿ ನಡೆಯುತ್ತದೆ. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದರು. ಸದ್ಯ ಪ್ರತಿಪಕ್ಷದ ನಾಯಕರಾಗಿದ್ದು, ಸಹಜವಾಗಿ ಪಕ್ಷದಲ್ಲಿ ಬದಲಾವಣೆಯಾಗುತ್ತದೆ ಎಂದರು.
ನಾನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ, ಮತ್ತೊಮ್ಮೆ ಸಂಸದೆಯಾಗಿಯೂ ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸದ್ಯೆ ನಾವ್ಯಾರು ಅಧ್ಯಕ್ಷರ ರೇಸ್ನಲ್ಲಿಲ್ಲ. ಈ ವಿಚಾರವಾಗಿ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಮಾಡ್ತಾರೆ ಎಂದರು.
ಇನ್ನು ಸುಮಲತಾ ಅವರಿಗೆ ಎಲ್ಲರೂ ಬೆಂಬಲ ಕೊಟ್ಟಿದ್ದರೆ ಸಂತೋಷ. ಅಂಬರೀಶ್ ತೀರಿಕೊಂಡಾಗ ಮೊಸಳೆ ಕಣ್ಣೀರು ಹಾಕೋದಲ್ಲ. ಅವರು ರಾಜಕಾರಣಕ್ಕೆ ಬರಬೇಕು ಅಂದಾಗ ಸಿಎಂ ಕುಮಾರಸ್ವಾಮಿ ಅವಕಾಶ ಕೊಡದೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ರು. ಮಂಡ್ಯದ ಜನ ಮತ್ತು ನಾಯಕರು ಅದಕ್ಕೆ ಸೆಡ್ಡು ಹೊಡೆದಿದ್ದಾರೆ. ಸುಮಲತಾ ಗೆದ್ದು ಬರುತ್ತಾರೆ ಎಂದು ಶೋಭಾ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ರಕ್ಷಣಾ ಇಲಾಖೆ ಸುವರ್ಣ ತ್ರಿಭುಜ ಪತ್ತೆ ಹಚ್ಚಿದ್ದು, ರಕ್ಷಣಾ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ವಿಚಾರವಾಗಿ ನಾನು ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದೆ, ಮತ್ತು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನ ಕರೆಸಿದ್ದೆ. ಆದ್ದರಿಂದಲೇ ರಕ್ಷಣಾ ಇಲಾಖೆ ಹಡಗು ಪತ್ತೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರಿಗೆ ಮತ್ತು ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ತಿಳಿಸಿದರು.