ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿ ಕಾಲಕ್ಕೆ ತಕ್ಕಂತೆ ಮೇಳಗಳು ನಡೆಯೋದು ಸಹಜ. ಅದರಂತೆ ಜನವರಿ 8 (ನಿನ್ನೆ) ರಿಂದ 17ರ ವರೆಗೆ ಅವರೆ ಮೇಳ ನಡೆಯಲಿದೆ.
ಹೌದು, ಮಾಗಡಿ ರೈತರು ಬೆಳೆದ ಅವರೆ ಕಾಳುಗಳನ್ನು ಬಳಸಿ ತಿನಿಸು ತಯಾರಿಸುವ ಈ ಮೇಳವನ್ನು ಕಳೆದ 21 ವರ್ಷಗಳಿಂದ ಆಯೋಜಿಸಲಾಗುತ್ತಿದೆ. ಸಜ್ಜನ್ ರಾವ್ ಸರ್ಕಲ್ ಬಳಿ ಈ ಅವರೆ ಮೇಳ ನಡೆಯುತ್ತಿದ್ದು, ಅವರೆ ಬೇಳೆಗಳ ವಿವಿಧ ರುಚಿಕರ ತಿನಿಸುಗಳು ದೊರೆಯುತ್ತವೆ.
ಈ ಹಿಂದಿನಿಂದಲೂ ಅವರೆ ಬೇಳೆಯಿಂದ ತಯಾರಿಸಿದ ಹೋಳಿಗೆ, ಉಪ್ಪಿಟ್ಟು, ಪುಲಾವ್, ನಿಪ್ಪಟ್ಟು, ಚಿತ್ರಾನ್ನ, ವಡೆ, ಬೊಂಡಾ, ರೊಟ್ಟಿ, ಕೋಡುಬಳೆ, ಮಿಕ್ಸ್ಚರ್ ಹೀಗೆ ವಿಭಿನ್ನ ತಿನಿಸುಗಳನ್ನು ಈ ಮೇಳದಲ್ಲಿ ತಯಾರಿಸಲಾಗುತ್ತದೆ. ಜನರು ಕೂಡ ಈ ರುಚಿಕರ ತಿನಿಸುಗಳನ್ನು ಸವಿಯಲು ಮುಗಿ ಬೀಳುತ್ತಿದ್ದರು. ಆದ್ರೆ ಈ ಬಾರಿ ಅವರೆ ಮೇಳದಲ್ಲಿ ಕೊಂಚ ವ್ಯತ್ಯಾಸಗಳಿದ್ದು, 20ಕ್ಕೂ ಹೆಚ್ಚು ವೆರೈಟಿಗಳ ಬದಲು ಈಗ ಕೊರೊನಾ ಕಾರಣದಿಂದಾಗಿ ಕೇವಲ 5-6 ಬಗೆಯ ತಿನಿಸುಗಳನ್ನು ಮಾತ್ರ ತಯಾರಿಸಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: ಬಸ್ ದರಕ್ಕಿಂತ ಕಡಿಮೆಯಾದ ವಿಮಾನಯಾನ... ಮೈಸೂರು ಟು ಬೆಳಗಾವಿ, ಚೆನ್ನೈಗೆ ಕೇವಲ ರೂ.___!
ಈ ಮೇಳದಿಂದ ಅದೆಷ್ಟೋ ರೈತರು ಬೆಳೆದ ಅವರೆಕಾಳಿಗೆ ಬೆಂಬಲ ಸಿಕ್ಕಂತಾಗುತ್ತದೆ. ಕೋವಿಡ್ ಇರುವ ಕಾರಣ ಎಲ್ಲಾ ಆಹಾರ ಪ್ರಿಯರು ಮೇಳಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಆನ್‌ಲೈನ್ ಮೂಲಕವೂ ಕೂಡ ಬೇಕಾದ ತಿನಿಸುಗಳನ್ನು ಆರ್ಡರ್ ಮಾಡಿ ಇದ್ದಲ್ಲಿಗೆ ತರಿಸಿಕೊಳ್ಳಬಹುದು. ಇನ್ನು ಸುರಕ್ಷತೆಯ ಕ್ರಮವಾಗಿ, ಬರುವ ಗ್ರಾಹಕರನ್ನು ಒಳಗೆ ಪ್ರವೇಶಿಸುವ ಮೊದಲು ಸ್ಯಾನಿಟೈಸಿಂಗ್ ಟನಲ್ ಮೂಲಕವೇ ಒಳ ಪ್ರವೇಶಿಸುವಂತ ವ್ಯವಸ್ಥೆ ಮಾಡಲಾಗಿದೆ.
ಒಟ್ಟಿನಲ್ಲಿ ಒಂದೇ ಸೂರಿನಡಿ ಎಲ್ಲಾ ಬಗೆಯ ಅವರೆ ತಿಂಡಿಗಳ ಸವಿಯನ್ನು ಸವಿಯುವ ಅವಕಾಶ ಅವರೆ ಪ್ರಿಯರಿಗಾಗಿ ಕಾಯುತ್ತಿದೆ.