ಬೆಂಗಳೂರು: ಎಣ್ಣೆ ಮತ್ತಿನಲ್ಲಿ ಪತ್ನಿಯನ್ನು ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಎಂದು ಕಟ್ಟುಕಥೆ ಕಟ್ಟಿದ ಪತಿರಾಯನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡು ಮೂಲದ ಸುರೇಶ್ (32) ಬಂಧಿತ ಆರೋಪಿ. ಜೂನ್ 7ರಂದು ದಂಪತಿ ಮನೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಪತ್ನಿ ವೆಂಕಟಲಕ್ಷ್ಮಿ, ನೀನು ವೃತ್ತಿಯಲ್ಲಿ ಟೈಲರ್. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ನಿನ್ನಿಂದ ನನ್ನ ಜೀವನ ಹಾಳಾಯಿತು ಎಂದು ಕಿರಿಕ್ ಮಾಡಿದ್ದಾಳೆ. ಇಷ್ಟೆಲ್ಲ ಜಗಳ ನಡೆದರೂ ಪತಿ ಸುರೇಶ್ ರೂಮ್ಗೆ ತೆರಳಿ ಮಲಗಿದ್ದಾನೆ. ಆದರೆ ಮಧ್ಯರಾತ್ರಿ 1ಗಂಟೆ ಸುಮಾರಿಗೆ ಮತ್ತೆ ಜಗಳ ಶುರು ಮಾಡಿದ್ದಾಳೆ. ಇದರಿಂದ ಕೋಪಗೊಂಡ ಸುರೇಶ್ ಚಾಕುವಿನಿಂದ ಕತ್ತುಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಘಟನಾ ಸ್ಥಳಕ್ಕೆ ಆಗಮಿಸಿದ ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಬಳಿಕ ವರದಿ ಬಂದಿದ್ದು, ಅಸಲಿ ಸತ್ಯ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪತಿ ಸುರೇಶ್ ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸದ್ಯ ಇವರಿಬ್ಬರಿಗೆ ಗಂಡು ಮಗುವೊಂದಿದ್ದು, ಇದೀಗ ಆ ಮಗು ಅನಾಥವಾಗಿದೆ.