ಬೆಂಗಳೂರು : ಒಂಟಿ ಮಹಿಳೆಯನ್ನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಅಶೋಕನಗರ ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ಬಳಿಯ ಮನೆಯೊಂದರಲ್ಲಿ ನಡೆದಿದೆ. ಮುಬೀನ್ ಕೌಸರ್ (34) ಆಕೆಯ ಗಂಡನಿಂದಲೇ ಕೊಲೆಯಾದ ಮಹಿಳೆ. ಕೌಟುಂಬಿಕ ಕಾರಣಗಳಿಂದ ಗಂಡನಿಂದ ದೂರವಾಗಿದ್ದ ಮುಬಿನ್ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇಂದು ಮಧ್ಯಾಹ್ನ ಮುಬಿನ್ ವಾಸವಿದ್ದ ಮನೆಗೆ ಆಕೆಯ ಪತಿ ಬಂದಿದ್ದ. ಈ ವೇಳೆ ಮನೆಯ ಬಾಗಿಲ ಬಳಿಯಲ್ಲೇ ಗಂಡ ಹೆಂಡತಿಗೆ ಜಗಳ ಆರಂಭವಾಗಿತ್ತು. ಜಗಳವಾಡುತ್ತಲೇ ಆರೋಪಿ ತನ್ನ ಹೆಂಡತಿ ಕುತ್ತಿಗೆಗೆ ಚಾಕು ಇರಿದಿದ್ದು, ಪರಿಣಾಮ ಬಾಗಿಲ ಹೊಸ್ತಿಲಲ್ಲೆ ಬಿದ್ದು ಮುಬಿನ್ ಪ್ರಾಣ ಬಿಟ್ಟಿದ್ದಾಳೆ.
ಹತ್ಯೆಯ ಬಳಿಕ ಆಕೆಯ ಪತಿ ಎಸ್ಕೇಪ್ ಆಗಿದ್ದು, ಅಕ್ಕಪಕ್ಕದವರು ಅಶೋಕನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಶ್ವಾನದಳ ಮತ್ತು ಎಫ್ಎಸ್ಎಲ್ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದೆ.
ಬೈಕ್ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದ ಮಹಿಳೆ: ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಸ್ಕಿಡ್ ಆಗಿ ಬಿದ್ದು ಅಪಘಾತವಾಗಿ ಮಹಿಳೆಯೊಬ್ಬರು ಸಾವಿಗೀಡಾಗಿರುವ ಘಟನೆ ಕಬ್ಬನ್ ಪಾರ್ಕ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿವಾಜಿ ನಗರದ ನಿವಾಸಿ ಸುಧಾ (37) ಮೃತ ಮಹಿಳೆ ಎಂಬುದಾಗಿ ತಿಳಿದುಬಂದಿದೆ.
ಬೆಳಗ್ಗೆ 8.15ರ ವೇಳೆ ಮಗಳನ್ನ ಖಾಸಗಿ ಕಾಲೇಜಿಗೆ ಬಿಟ್ಟು ಎಂ ಜಿ ರಸ್ತೆ ಕಡೆ ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ವಾಹನವೊಂದರ ಇಂಜಿನ್ ಆಯಿಲ್ ಲೀಕ್ ಆಗಿತ್ತು. ಆಗ ನಿಧಾನ ಗತಿಯಲ್ಲಿಯೇ ವಾಹನಗಳು ಹೋಗುತ್ತಿದ್ದವು. ಇದನ್ನು ಗಮನಿಸದೇ ಆಯಿಲ್ ಮೇಲೆ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿದ ಪರಿಣಾಮ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಹಿಂಬದಿ ಚಕ್ರ ಮಹಿಳೆ ತಲೆಯ ಮೇಲೆ ಹರಿದಿದೆ. ಈ ಸಂದರ್ಭ ತಲೆಗೆ ಗಂಭೀರ ಗಾಯವಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ ಸಂಭವಿಸಿದ ಸಂದರ್ಭ ಆ ಮಹಿಳೆ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿದ್ದರು. ಇದರಿಂದ ತಲೆಗೆ ಬಲವಾದ ಏಟು ಬಿದ್ದಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೊಬೈಲ್, ಸರ ಕಸಿದು ಪರಾರಿಯಾಗುತ್ತಿದ್ದವರ ಬಂಧನ: ಮತ್ತೊಂದೆಡೆ ದ್ವಿಚಕ್ರ ವಾಹನದಲ್ಲಿ ಬಂದು ಸಾರ್ವಜನಿಕರ ಮೊಬೈಲ್ ಫೋನ್ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಜಕುಮಾರ್ ಹಾಗೂ ವೆಂಕಟೇಶ್ ಬಂಧಿತ ಆರೋಪಿಗಳಾಗಿದ್ದಾರೆ.
ರಸ್ತೆಯಲ್ಲಿ ಮೊಬೈಲ್ನಲ್ಲಿ ಮಾತನಾಡಿಕೊಂಡು ಹೋಗುವರನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ದ್ವಿಚಕ್ರ ವಾಹನದಲ್ಲಿ ಬಂದು ಅವರ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು. ಫೆ. 7ರಂದು ಇದೇ ರೀತಿ ಅನ್ನಪೂರ್ಣೇಶ್ವರಿ ನಗರದ ಮೇಲ್ಸೇತುವೆ ಕೆಳಗೆ ಸಾಗುತ್ತಿದ್ದ ಕೃಷ್ಣಮೂರ್ತಿ ಎಂಬುವವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಬಂಧಿತರಿಂದ ಎರಡು ಮೊಬೈಲ್ ಹಾಗೂ ಮೂರು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಎಫ್‌ಡಿಎ ಅನುಮಾನಾಸ್ಪದ ಸಾವು.. ಆತ್ಮಹತ್ಯೆ ಶಂಕೆ