ಬೆಂಗಳೂರು: ಇಬ್ಬರ ಮಧ್ಯೆ ದಾಂಪತ್ಯ ಜೀವನ ಹೊಂದಾಣಿಕೆ ಆಗದಿದ್ದಕ್ಕೆ ಕೋಪಕೊಂಡ ವ್ಯಕ್ತಿವೋರ್ವ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ದುರ್ಗಾಪರಮೇಶ್ವರಿ ಲೇಔಟ್ನ ಕೊತ್ತನೂರಿನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೊತ್ತನೂರಿನ ಶಿಲ್ಪಾ ಕೊಲೆಗೀಡಾಗಿರುವ ಗೃಹಿಣಿ. ಕೊಲೆ ಆರೋಪಿಗಳಾದ ಪತಿ ಕಲ್ಲೇಶ್ ಹಾಗೂ ಆತನ ಸಹೋದರ ಕೃಷ್ಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಒಂದು ವರ್ಷದಿಂದ ದಾಂಪತ್ಯ ಜೀವನ ನಡೆಸುತ್ತಿದ್ದ ಶಿಲ್ಪಾ ಹಾಗೂ ಪತಿ ಕಲ್ಲೇಶ್ ನಡುವೆ ಹೊಂದಾಣಿಕೆ ಇರದ ಕಾರಣ ಜಗಳವಾಡುತಿದ್ದರು ಎನ್ನಲಾಗ್ತಿದೆ. ಸೋಮವಾರದಿಂದ ಶಿಲ್ಪಾ ಕಾಣಿಸಿರಲಿಲ್ಲ. ಹೀಗಾಗಿ ಆಕೆಯ ಪೋಷಕರು ಕಲ್ಲೇಶನನ್ನು ಪದೇ ಪದೇ ಪ್ರಶ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಶನಿವಾರ ಆತ ಪತ್ನಿ ನಾಪತ್ತೆಯಾಗಿದ್ದ. ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಶಿಲ್ಪಾ ಸಂಬಂಧಿಕರು ದೂರು ದಾಖಲಿಸಿದ್ದರು.
ಆ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು ಕಲ್ಲೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ದಾಂಪತ್ಯ ಜೀವನಕ್ಕೆ ಒಂದು ವರ್ಷವಾಗಿದ್ದು, ಇಬ್ಬರ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಆ.12 ರಂದು ಇಬ್ಬರ ಮಧ್ಯೆ ಹಣಕಾಸಿನ ವಿಚಾರವಾಗಿ ಜಗಳ ನಡೆದಿದ್ದು, ರಾತ್ರಿ 2 ಗಂಟೆಯ ಸುಮಾರಿಗೆ ಶಿಲ್ಪಾಳ ಕತ್ತು ಹಿಸುಕಿ ದಿಂಬಿನಿಂದ ಉಸಿರುಗಟ್ಟಿ ಕೊಲೆ ಮಾಡಿದ್ದರು. ನಂತರ ಸಹೋದರ ಕೃಷ್ಣಪ್ಪನ ಸಹಾಯದಿಂದ ಬೈಕ್ ಮೇಲೆ ಶವವನ್ನು ನಿರ್ಜನ ಪ್ರದೇಶಕ್ಕೆ ಸಾಗಿಸಲಾಗಿತ್ತು ಎಂದು ಆರೋಪಿ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ.
ಸದ್ಯ ಕಲ್ಲೇಶ್ ಹಾಗೂ ಆತನ ಸಹೋದರ ಕೃಷ್ಣಪ್ಪನನ್ನು ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.