ಬೆಂಗಳೂರು : ತನ್ನ ಹೆಂಡತಿ ಸದಾ ಮೊಬೈಲ್‌ನಲ್ಲಿ ಮಾತನಾಡುತ್ತಾಳೆ ಎಂದು ಅನುಮಾನಿಸಿ, ಪತ್ನಿ ಜತೆ ಜಗಳವಾಡಿದ ಗಂಡ, ಹೆಂಡತಿಯನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನ ರಾಮಮೂರ್ತಿನಗರದ ಹತ್ತಿರದಲ್ಲಿರುವ ಚನ್ನಸಂದ್ರದಲ್ಲಿ ನಡೆದಿದೆ. ನೇಪಾಳ ಮೂಲದ ಕಮಲಾದೇವಿ(45) ಎಂಬುವರು ಕೊಲೆಯಾದ ಮಹಿಳೆ. ಇವರ ಪತಿ ತೇಜ್ ಬಹದ್ದೂರ್ (52) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ನೇಪಾಳ ಮೂಲದ ಈ ದಂಪತಿ 20 ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಮೊದಲು ಸಂಜಯನಗರದಲ್ಲಿ ವಾಸವಾಗಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಮನೆ ಬದಲಿಸಿ ಚನ್ನಸಂದ್ರದಲ್ಲಿ ವಾಸವಾಗಿದ್ದರು. ಇವರಿಗೆ ಒಬ್ಬ ಮಗ ಹಾಗೂ ಮಗಳಿದ್ದು, ಮಗಳನ್ನು ಮದುವೆ ಮಾಡಿಕೊಡಲಾಗಿತ್ತು. ಈ ಬಡಾವಣೆಗೆ ಬಂದ ಕೆಲವೇ ದಿನಗಳಲ್ಲಿ ಪತ್ನಿ ಮಗನನ್ನು ಬಿಟ್ಟು ತೇಜ್ ಬಹದ್ದೂರ್ ಬೇರೆ ಹೋಗಿದ್ದನು ಎಂದು ಪ್ರಕರಣದ ಕುರಿತು ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
ಮೂರ್ನಾಲ್ಕು ದಿನಗಳ ಹಿಂದೆ ವಾಪಸ್ ಬಂದಿದ್ದ ಪತಿ : ಬಿ.ಚನ್ನಸಂದ್ರದಲ್ಲಿ ತಾಯಿ ಮಗ ಇಬ್ಬರೇ ವಾಸವಾಗಿದ್ದರು. ಮಗ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ತೇಜ್ ಬಹದ್ದೂರ್ ವಾಪಸ್ ಮನೆಗೆ ಬಂದು ಜತೆಯಲ್ಲಿರುವುದಾಗಿ ಹೇಳಿದ್ದ. ಬಂದ ನಂತರ ಬೇರೆಯವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡುವುದನ್ನು ಗಮನಿಸಿ ಪತಿ ಈ ವಿಚಾರವಾಗಿ ಜಗಳ ಮಾಡುತ್ತಿದ್ದನಂತೆ.
ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಕೊಲೆ : ನಿನ್ನ( ಶುಕ್ರವಾರ) ಮಗ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಇದೇ ವಿಚಾರವಾಗಿ ದಂಪತಿ ನಡುವೆ ರಾತ್ರಿ 8.30ರ ಸುಮಾರಿನಲ್ಲಿ ಜಗಳವಾಗಿದೆ. ಈ ವೇಳೆ ತೇಜ್ ಬಹದ್ದೂರ್, ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಪತ್ನಿ ಹೊಟ್ಟೆ ಹಾಗೂ ಕಿಬ್ಬೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿ: ಅಕ್ಕಪಕ್ಕದವರು ಇವರ ಮನೆಯಲ್ಲಿ ಕೂಗಾಟ, ಕಿರುಚಾಟ ಕೇಳಿ ಮನೆಯ ಬಳಿ ಬಂದು ನೋಡಿದಾಗ ಕಮಲಾದೇವಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇದನ್ನು ಕಂಡ ಅಕ್ಕಪಕ್ಕದ ಮನೆಯವರು ತಕ್ಷಣ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ರಾಮಮೂರ್ತಿನಗರ ಪೊಲೀಸರು, ಪರಿಶೀಲನೆ ನಡೆಸಿ ಶವವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿ, ಆರೋಪಿ ತೇಜ್ ಬಹದ್ದೂರ್‌ನನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.