ಬೆಂಗಳೂರು: ಗಂಡ ಸಾಲ ಮಾಡಿದ್ರೆ ಮನೆಯಲ್ಲಿ ಹೆಂಡತಿ ಜಗಳಮಾಡೋದು ಕಾಮನ್. ಸಾಲ ತೀರಿಸಿ ನೆಮ್ಮದಿ ಜೀವನ ಮಾಡಬೇಕು ಅಂದುಕೊಳ್ಳೊದು ಪ್ರತಿ ಗೃಹಿಣಿಯ ಆಸೆ ಕೂಡ ಆಗಿರುತ್ತೆ. ಆದರೆ ಹೆಂಡತಿ ಸಾಲ ತೀರಿಸು ಅಂತ ಗಲಾಟೆ ಮಾಡಿದ್ದಕ್ಕೆ ಹೆಂಡತಿಯನ್ನೇ ಕೊಲೆ ಮಾಡಿ ನಂತರ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾನೆ. ಈ ಘಟನೆ ಬೆಂಗಳೂರಿನ ಮತ್ತಿಕೆರೆ ಬಸ್ ನಿಲ್ದಾಣದ ಬಳಿ ನಡೆದಿದೆ.
ಅನುಸೂಯ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ತಾನೇಂದ್ರ ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ. ಇನ್ನು ಅಪ್ಪ-ಅಮ್ಮನ ಜಗಳದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ 13 ವರ್ಷದ ಮಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಓದಿ: ಅಮೆರಿಕದಲ್ಲಿ ತೆಲಂಗಾಣದ ಸಾಫ್ಟವೇರ್ ಇಂಜಿನಿಯರ್ನ ಗುಂಡಿಕ್ಕಿ ಕೊಲೆ
ತಾನೇಂದ್ರ 1.20 ಲಕ್ಷ ಸಾಲ ಮಾಡಿಕೊಂಡಿದ್ದ. ಈ ಸಾಲವನ್ನು ತೀರಿಸುವಂತೆ ತಾನೇಂದ್ರ ಜೊತೆ ಪತ್ನಿ ಅನಸೂಯ ಗಲಾಟೆ ಮಾಡ್ತಿದ್ದಳು. ಬೆಳಗಿನ ಜಾವ 3 ಗಂಟೆ ಸಂದರ್ಭದಲ್ಲಿ ಮಲಗಿದ್ದ ಅನಸೂಯಾ ಮೇಲೆ ತಾನೇಂದ್ರ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಮುಂಜಾನೆ ತನಕ ಪತ್ನಿ ಶವದ ಪಕ್ಕದಲ್ಲೇ ಕಾಲ ಕಳೆದಿದ್ದಾನೆ.
ತಾಯಿ ಕೊಲೆಯಿಂದ ಪ್ರಜ್ಞೆ ತಪ್ಪಿದ್ದ ಮಗಳು ಎಚ್ಚರವಾದ ಬಳಿಕ ಜೋರಾಗಿ ಅಳುವುದಕ್ಕೆ ಶುರುಮಾಡಿದ್ದಳು. ಇದರಿಂದ ಮನಸು ಬದಲಿಸಿಕೊಂಡ ತಾನೇಂದ್ರ ಬೆಳಗ್ಗೆ 9:30ಕ್ಕೆ ಪೊಲೀಸ್ ಠಾಣೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ತಾನೇಂದ್ರನನ್ನು ಬಂಧಿಸಿ, ಅನುಸೂಯ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಆರೋಪಿಯು ಪತ್ನಿ ಮತ್ತು ಮಗಳನ್ನ ಕೊಲೆ ಮಾಡಿ, ತಾನೂ ಸಹ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆ ಮೂಲಕ ತಿಳಿದು ಬಂದಿದೆ. ಈ ಘಟನೆ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.