ಬೆಂಗಳೂರು: ದಂಪತಿ ನಡುವಿನ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನು ಗುಂಡಿಟ್ಟು ಕೊಲೆ ಮಾಡಿದ ಪತಿಯು ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಸುಮಿತ್ರಾ ಕೊಲೆಯಾದ ಮಹಿಳೆ. ಅವರ ಪತಿ ಕಾಳಪ್ಪ ಆತ್ಮಹತ್ಯೆ ಯತ್ನಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಬಸವೇಶ್ವರ ನಗರ ಪೊಲೀಸರು ತಿಳಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕಾಗಿ ಗಂಡ-ಹೆಂಡತಿ ಮಧ್ಯೆ ಜಗಳ ನಡೆದಿದೆ. ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಕಾಳಪ್ಪ ಮನೆಯಲ್ಲಿದ್ದ ಸಿಂಗಲ್ ಬ್ಯಾರಲ್ ಗನ್ನಿಂದ ಹೆಂಡತಿಯನ್ನು ಗುಂಡಿಟ್ಟು ಕೊಂದಿದ್ದಾನೆ. ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುಂಡಿನ ಸದ್ದ ಕೇಳಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕುಸಿದು ಬಿದ್ದಿದ್ದ ಕಾಳಪ್ಪನನ್ನು ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾಳಪ್ಪನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾಳಪ್ಪ ಬಳಿಯಿದ್ದ ಗನ್ ಪರವಾನಗಿ ಪಡೆದಿದ್ದಾ?, ಕೊಲೆಗೆ ಕಾರಣಗಳೇನು ಎಂಬುದರ ಬಗ್ಗೆ ಬಸವೇಶ್ವರ ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈ ಘಟನೆ ಕುರಿತು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.