ಬೆಂಗಳೂರು : ಪತ್ನಿ ಪ್ರತಿದಿನ ಬೆಳಿಗ್ಗೆ ತಡವಾಗಿ ಏಳುತ್ತಾಳೆ. ಆಕೆ ಹೇಳದಂತೆ ಕೇಳದಿದ್ದರೆ ಬೆದರಿಕೆ ಹಾಕುತ್ತಿದ್ದಾಳೆ ಎಂದು ಆರೋಪಿಸಿದ ಪತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕುಟುಂಬಸ್ಥರ ಇಚ್ಚೆಯಂತೆ ಕೈಹಿಡಿದ ಪತ್ನಿಯಿಂದ ಮಾನಸಿಕ ನೆಮ್ಮದಿಯಿಲ್ಲದೇ ಜೀವನವೇ ನರಕಯಾತನೆಯಾಗಿದೆ ಎಂದು 39 ವರ್ಷದ ವ್ಯಕ್ತಿಯೊಬ್ಬರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಫ್ಐಆರ್ ವಿವರ : 2017ರಲ್ಲಿ ತನಗೆ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದು, ಪತ್ನಿ ರಾತ್ರಿ ಮಲಗಿದ್ರೆ ಮಧ್ಯಾಹ್ನ 12-30ವರೆಗೂ ನಿದ್ದೆ ಮಾಡುತ್ತಾಳೆ. ನಂತರ ತನ್ನ ಸಣ್ಣಪುಟ್ಟ ಕೆಲಸಗಳನ್ನು ಮುಗಿಸಿ ಪುನಃ ಸಂಜೆ 5-30ಕ್ಕೆ ಮಲಗಿದ್ರೆ ರಾತ್ರಿ 9-30ಕ್ಕೆ ಎದ್ದೇಳುತ್ತಾಳೆ. ಕಳೆದ ಐದು ವರ್ಷದಿಂದಲೂ ಇದೇ ರೀತಿ ಆಗಿದ್ದು, ಅಡುಗೆ ಕೂಡಾ ಮಾಡುವುದಿಲ್ಲ. ಇದರಿಂದಾಗಿ ವಯಸ್ಸಾದ ನನ್ನ ತಾಯಿಯೇ ಅಡುಗೆ ಮಾಡಿ ಬಡಿಸಬೇಕು. ಪ್ರಶ್ನಿಸಿದರೆ ಆಕೆಯ ಕುಟುಂಬಸ್ಥರನ್ನ ಕರೆಸಿ ಹಲ್ಲೆ ಮಾಡಿಸುತ್ತಾಳೆ ಎಂದು ನೊಂದ ಪತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮದುವೆಗೂ ಮುನ್ನ ಆಕೆಗೆ ಟೈಫಾಯಿಡ್, ಥೈರಾಯ್ಡ್, ಕಣ್ಣಿಗೆ ಸಂಬಂಧಿಸಿದ ಖಾಯಿಲೆಗಳಿದ್ದು, ವಿಷಯ ಮುಚ್ಚಿಟ್ಟು ತನಗೆ ಮದುವೆ ಮಾಡಲಾಗಿದೆ. ರಾಯಲ್ ಲೈಫ್ ಲೀಡ್ ಮಾಡುವ ಉದ್ದೇಶದಿಂದ ತನ್ನ ಪತ್ನಿ ತನ್ನನ್ನು ಮದುವೆಯಾಗಿದ್ದಾಳೆ. ಮನೆಯಲ್ಲಿ ಕೆಲಸ ಮಾಡಲು ಹೇಳಿದರೆ ತನ್ನ ಜೊತೆ ಜಗಳವಾಡಿ 15 ರಿಂದ 20 ದಿನ ತವರು ಮನೆಗೆ ಹೋಗಿ ಸೇರಿಕೊಳ್ತಾಳೆ' ಎಂದು ದೂರುದಾರ ಪತಿ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.
ಇನ್ನು ಪತ್ನಿ ಯಾವಾಗಲೂ ತಾನು ತಾಯಿ ಮನೆಗೆ ಹೋಗುತ್ತೇನೆ, ಹುಷಾರಿಲ್ಲ ಎಂದು ಹೇಳಿದಾಗ ನಾನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದರೂ, ಆಕೆ ನೀನು ನೀನು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನನ್ನ ಫ್ಯಾಮಿಲಿ ಬಗ್ಗೆ ನಿನಗೆ ಗೊತ್ತಿಲ್ಲ ಎಂದು ನನಗೆ ಬೆದರಿಸುತ್ತಾಳೆ.
ದಿನಾಂಕ 2022ರ ಅಕ್ಟೋಬರ್ 6ರಂದು ಆಕೆಯು ತನ್ನ ತಾಯಿ ಮನೆಗೆ ಹೋಗುವುದಾಗಿ ಹೇಳಿದಾಗ ಎರಡು ದಿನದಲ್ಲಿ ಹಬ್ಬ ಇದೆ ಮುಗಿಸಿಕೊಂಡು ಹೋಗುವಂತೆ ಹೇಳಿದಾಗ ಅದೇ ದಿನ ರಾತ್ರಿ ಸುಮಾರು 20ರಿಂದ 25 ಜನರನ್ನು ಮನೆಗೆ ಕರೆಸಿ ನನ್ನ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿರುತ್ತಾರೆ. ಇದರಿಂದ ನನಗೆ ತುಂಬಾ ಗಾಯವಾಗಿದೆ, ಜೊತೆಗೆ ಗೃಹಪಯೋಗಿ ವಸ್ತುಗಳನ್ನು ನಾಶಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ನನ್ನ ತಾಯಿ ಪಾರ್ಕಿನ್ ಸನ್ ಖಾಯಿಲೆಯಿಂದ ಬಳಲುತ್ತಿದ್ದು, ಪತ್ನಿಗೆ ಅಡುಗೆ ಕೆಲಸವನ್ನು ಮಾಡುವಂತೆ ಹೇಳಿದರೆ, ಆಕೆ ಯಾವುದೇ ಕೆಲಸಗಳನ್ನು ಮಾಡದೇ ನನ್ನೊಂದಿಗೆ ಜಗಳ ತೆಗೆಯುತ್ತಾಳೆ. ನಾನು ಏನಾದರೂ ಕೆಲಸ ಹೇಳಿದರೆ, ಆಕೆ ನನ್ನಲ್ಲಿ ಇಲ್ಲಸಲ್ಲದ ಕಾರಣ ಹೇಳಿ ಕೂಗಾಡಿ ನನ್ನ ವಿರುದ್ಧ ಕಂಪ್ಲೆಂಟ್ ಕೊಡುವುದಾಗಿ ಬೆದರಿಕೆ ಹಾಕುತ್ತಿರುತ್ತಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನೊಂದ ವ್ಯಕ್ತಿಯ ದೂರಿನನ್ವಯ ಆತನ ಪತ್ನಿ, ಮಾವ ಆರೀಫ್ ಪಾಶಾ, ಅತ್ತೆ ಹೀನಾ ಕೌಸರ್, ಹಾಗೂ ಮೊಹಮ್ಮದ್ ಮೋಯಿನ್ ಎಂಬಾತನ ವಿರುದ್ಧ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣಕ್ಕೆ ಒಳಗಾಗಿರುವ ಪತ್ನಿ ಹುಡುಕಿಕೊಡುವಂತೆ ಪತಿ ಮನವಿ: ಪತ್ನಿಯನ್ನು ಹುಡುಕಿಕೊಡುವಂತೆ ಬೆಂಗಳೂರು ನಗರ ಪೊಲೀಸರಿಗೆ ಛತ್ತೀಸ್ಗಡ ಮೂಲದ ಪತಿಯೊಬ್ಬರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ತನ್ನ ಪತ್ನಿಯನ್ನ ಅವಿನಭ ಚಕ್ರವರ್ತಿ ಎಂಬಾತ ಕಿಡ್ನ್ಯಾಪ್ ಮಾಡಿದ್ದಾನೆ. ಸದ್ಯ ತನ್ನ ಹೆಂಡತಿ ಬೆಂಗಳೂರಿನಲ್ಲಿದ್ದು, ನಿಖರವಾಗಿ ಎಲ್ಲಿ ಅಂತಾ ಗೊತ್ತಿಲ್ಲ. ಆತನ ಮೊಬೈಲ್ ನಂಬರ್ ಸಮೇತ ಪೋಸ್ಟ್ ಮಾಡಲಾಗಿದ್ದು, ಆತನನ್ನ ಪತ್ತೆ ಹಚ್ಚಿ ಪತಿಯನ್ನ ರಕ್ಷಿಸುವಂತೆ ಬೆಂಗಳೂರು ನಗರ ಪೊಲೀಸರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾನೆ. ಇದಕ್ಕೆ ಸ್ಪಂದಿಸಿರುವ ನಗರ ಪೊಲೀಸರು, ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಲಿಖಿತವಾಗಿ ದೂರು ನೀಡುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ಐಫೋನ್‌ಗಳಿದ್ದ ಪಾರ್ಸೆಲ್ ಸಮೇತ ಡೆಲಿವರಿ ಬಾಯ್ಸ್ ಪರಾರಿ