ಬೆಂಗಳೂರು: ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾಗಿ ಕದ್ದು ಮುಚ್ಚಿ ಸಂಸಾರ ನಡೆಸುತ್ತಿದ್ದ ಪತಿರಾಯನೊಬ್ಬ ಸಿಕ್ಕಿಬಿದ್ದು, 1ನೇ ಪತ್ನಿಯಿಂದ ಗೂಸಾ ತಿಂದ ಘಟನೆ ನಗರದ ವಿದ್ಯಾರಣ್ಯಪುರದ ಸಿಂಗಾಪುರ ಲೇಔಟ್‌ನಲ್ಲಿ ನಡೆದಿದೆ.
ಪತ್ನಿ ಕೈಗೆ ಸಿಕ್ಕಿಬಿದ್ದ ಪತಿ ರಘುನಂದನ್ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊದಲ ಪತ್ನಿ ದೂರು ದಾಖಲಿಸಿದ್ದಲ್ಲದೇ, ಆತ ಎರಡನೇ ಪತ್ನಿ ಜೊತೆಗೆ ಇದ್ದಾಗ ಹಿಡಿದು ಮನೆಯಿಂದ ಆಚೆಗೆ ಎಳೆದುಕೊಂಡು ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾಳೆ.
ಕೆಲ ವರ್ಷಗಳ ಹಿಂದೆ ಮೊದಲ ಪತ್ನಿ ಹಾಗೂ ರಘುನಂದನ್ ಪ್ರೀತಿಸುತ್ತಿದ್ದರು. ಆದರೆ, ಇಬ್ಬರದ್ದು ಜಾತಿ ಬೇರೆ ಎನ್ನುವ ಕಾರಣಕ್ಕೆ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಈ ವೇಳೆ ರಘುನಂದನ್ ಮದುವೆಯಾಗದೇ ಸತಾಯಿಸಿದ್ದ. ಅಲ್ಲದೆ ಮದುವೆಗೆ ಮುನ್ನವೇ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಪರಾರಿಯಾಗಿದ್ದ. ಹೀಗಾಗಿ ದಿವ್ಯಾಶ್ರೀ ಅತ್ಯಾಚಾರ ಕೇಸ್ ದಾಖಲಿಸಿದ್ದಳು. ನಂತರ ಕೋರ್ಟ್ ಆದೇಶದ ಮೇರೆಗೆ ದಿವ್ಯಶ್ರೀಯನ್ನು ಮದುವೆಯಾಗಿದ್ದ.
ಮದುವೆಯ ಬಳಿಕವೂ ಕೂಡ ದಂಪತಿ ನಡುವೆ ಮತ್ತೆ ಜಗಳವಾಗುತ್ತಿತ್ತಂತೆ. ಕೆಲ ವರ್ಷಗಳ ಕಾಲ ಮೊದಲ ಪತ್ನಿ ಜೊತೆ ಸಂಸಾರ ನಡೆಸಿದ ರಘುನಂದನ್, ಈ ಮಧ್ಯೆ ಮತ್ತೋರ್ವ ಮಹಿಳೆ ಜೊತೆ ವಿವಾಹವಾಗಿದ್ದಾನೆ. ಈ ಬಗ್ಗೆ ಮೊದಲ ಪತ್ನಿಗೆ ಅನುಮಾನ ಬಂದಿದೆ. ಈಗ ಎರಡನೇ ಪತ್ನಿ ಜೊತೆ ಪತಿ ನೇರವಾಗಿ ಸಿಕ್ಕಿಬಿದ್ದು ಗೂಸಾ ತಿಂದಿದ್ದಾನೆ. ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.