ಬೆಂಗಳೂರು: ಸಂಘ ಸಂಸ್ಥೆಗಳು ಅಥವಾ ಜನಪ್ರತಿನಿಧಿಗಳು ತಮ್ಮ ವಾಹನಗಳ ಮೇಲೆ ಮಾನವ ಹಕ್ಕು ಆಯೋಗದ ಲಾಂಚನ ಮತ್ತು ಹೆಸರು ಬರೆಸಿಕೊಂಡು ದುರುಪಯೋಗ ಮಾಡುತ್ತಿರುವುದನ್ನು ತಡೆಯಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ತಾಕೀತು ಮಾಡಿದೆ.
ಮಾನವ ಹಕ್ಕು ಆಯೋಗದ ಲಾಂಚನ ಹಾಗು ಹೆಸರು ದುರ್ಬಳಕೆ ತಡೆಗಟ್ಟಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಣಾಮಕಾರಿ ಹೆಜ್ಜೆ ಇರಿಸಿಲ್ಲ ಎಂದು ಪೀಠ ಬೇಸರ ವ್ಯಕ್ತಪಡಿಸಿತು. ಹಾಗೆಯೇ ದುರ್ಬಳಕೆ ಬಗ್ಗೆ ಜನ ಜಾಗೃತಿ ಮೂಡಿಸಲು ತಕ್ಷಣವೇ ಮುಂದಾಗುವಂತೆ ಸರ್ಕಾರಕ್ಕೆ ನಿರ್ದೇಶಿಸಿತು. ಅಲ್ಲದೇ, ಮಾನವ ಹಕ್ಕುಗಳ ಲಾಂಚನ ಮತ್ತು ಹೆಸರು ದುರುಪಯೋಗ ತಡೆಗಟ್ಟಲು ತಮಿಳುನಾಡು ಸರ್ಕಾರ ಸಂಘಸಂಸ್ಥೆಗಳ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದಿರುವಂತೆ ರಾಜ್ಯ ಸರ್ಕಾರವು ಕೂಡ ದುರುಪಯೋಗ ತಡೆಗೆ ಪರಿಣಾಮ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿತು.
ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಹಾಗು ಸ್ಥಳೀಯ ಸಂಘಸಂಸ್ಥೆಗಳ ಎಲ್ಲ ಸದಸ್ಯರಿಗೂ ಈ ರೀತಿ ಮಾನವ ಹಕ್ಕುಗಳ ಲಾಂಚನ ಮತ್ತು ಹೆಸರು ದುರುಪಯೋಗ ತಡೆ ಕುರಿತ ಮಾಹಿತಿ ತಕ್ಷಣವೇ ಲಭ್ಯವಾಗಬೇಕು. ಈ ದಿಸೆಯಲ್ಲಿ ಕೈಗೊಂಡ ಎಲ್ಲ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ವರದಿ ನೀಡಬೇಕು ಎಂದು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿ, ವಿಚಾರಣೆ ಮುಂದೂಡಿದೆ.