ಬೆಂಗಳೂರು: ಕಲ್ಲು ಗಣಿಗಾರಿಕೆಗೆ ನೀಡಿರುವ ಗುತ್ತಿಗೆ ಪರವಾನಗಿಯನ್ನು ನಿರ್ಬಂಧಿಸುವ ಅಧಿಕಾರ ಮಾನವ ಹಕ್ಕು ಆಯೋಗಕ್ಕೆ ಇಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶದ ಮೇಲೆ ಕಲ್ಲು ಗಣಿಗಾರಿಕೆ ಗುತ್ತಿಗೆ ಪರವಾನಗಿ ನವೀಕರಿಸಲು ನಿರಾಕರಿಸಲಾಗಿತ್ತು. ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆದೇಶ ಪ್ರಶ್ನಿಸಿ ಮುನೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಗಣಿಗಾರಿಕೆ ಗುತ್ತಿಗೆ ಪರವಾನಗಿ ನವೀಕರಣ ಕೋರಿ ಅರ್ಜಿದಾರರು 2014ರ ಸೆಪ್ಟೆಂಬರ್ 26ರಂದು ಅರ್ಜಿ ಸಲ್ಲಿಸಿದ್ದರು. ಆದರೆ ಉದ್ದೇಶಿತ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಮಾನವ ಹಕ್ಕುಗಳ ಆಯೋಗ ನಿರ್ಬಂಧ ಹೇರಿತ್ತು.
ಆದ್ದರಿಂದ, ಅರ್ಜಿದಾರರಿಗೆ ಗಣಿಗಾರಿಕೆ ಪರವಾನಗಿ ನವೀಕರಿಸಲು ಸಾಧ್ಯವಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೇಳಿತ್ತು. ಈ ಕ್ರಮ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ವಿಭಾಗೀಯ ಪೀಠ, ಪರವಾನಗಿ ನವೀಕರಣ ಕೋರಿ ಅರ್ಜಿದಾರರು ಮೂರು ತಿಂಗಳಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬಹುದು. ಅದನ್ನು ಪರಿಗಣಿಸಿ ಇಲಾಖೆ ನಿಯಮಾನುಸಾರ ಹೊಸ ಆದೇಶ ಮಾಡಬಹುದು ಎಂದು ಆದೇಶಿಸಿದೆ.