ಬೆಂಗಳೂರು: ಹುಳಿಮಾವು ಕೆರೆ ಕೋಡಿ ಒಡೆದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಐದಕ್ಕೂ ಹೆಚ್ಚು ಬಡಾವಣೆಗಳು ನೀರಿನಲ್ಲಿ ಮುಳುಗಡೆಯಾಗಿದೆ.
ಅದರಲ್ಲಿ ಪ್ರಮುಖವಾಗಿ ನ್ಯಾನೋ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ನ ತುರ್ತು ಚಿಕಿತ್ಸಾ ಘಟಕ ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ಮೌಲ್ಯದ ಯಂತ್ರಗಳು ಸೇರಿ ಭಾರಿ ಪ್ರಮಾಣದಲ್ಲಿ ಹಾನಿಯಾಗಿತ್ತು. ಮಧ್ಯರಾತ್ರಿ 2 ಗಂಟೆ ಕಳೆದರೂ ಇಲ್ಲಿನ ನೀರನ್ನು ಹೊರ ಹಾಕುವ ಕಾರ್ಯವನ್ನು ಅಗ್ನಿಶಾಮಕದಳದ ಸಿಬ್ಬಂದಿ ಮುಂದುವರಿಸಿದ್ದರು.
ಅವನಿ ಶೃಂಗೇರಿ ನಗರಕ್ಕೆ ಸೇರಿದ ಇಪ್ಪತ್ತಕ್ಕೂ ಹೆಚ್ಚು ಅಪಾರ್ಟ್ಮೆಂಟ್ಗಳ ನೆಲಮಹಡಿಯಲ್ಲಿದ್ದಂತಹ ನೀರನ್ನು ಹೊರ ಹಾಕುವ ಕಾರ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಗ್ನಿಶಾಮಕದಳದ ಸಿಬ್ಬಂದಿ ಸಮಯ ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಿರುವುದನ್ನು ಶ್ಲಾಘಿಸಿದರು.
ಇನ್ನು ಮನೆಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಸುತ್ತಮುತ್ತಲು ನಿರ್ಮಿಸಲಾಗಿದ್ದ ಪುನರ್ವಸತಿ ಕೇಂದ್ರಗಳಲ್ಲಿ ಕೆಲವರು ಆಶ್ರಯ ಪಡೆದರು. ಸದ್ಯ ನೀರಿನ ಹರಿವು ನಿಂತಿದ್ದು, ಎರಡರಿಂದ ಮೂರು ದಿನಗಳಲ್ಲಿ ಹುಳಿಮಾವು ಮತ್ತು ಸುತ್ತಮುತ್ತಲಿನ ಪ್ರದೇಶ ಸಾಮಾನ್ಯ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ.