ಬೆಂಗಳೂರು: ಹುಳಿಮಾವು ಕೆರೆ ಕಟ್ಟೆ ಹೊಡೆದ ಪರಿಣಾಮ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಆರ್ಆರ್ ರೆಸಿಡೆನ್ಷಿಯಲ್ ಲೇಔಟ್, ಅವನಿ ಶೃಂಗೇರಿ ನಗರ, ಸಾಯಿಬಾಬಾ ದೇವಸ್ಥಾನ ಜಂಕ್ಷನ್ ಮುಳುಗಡೆಯಾಗಿತ್ತು. ಘಟನೆ ನಡೆದು ಒಂದು ವಾರ ಕಳೆದರು ಪರಿಹಾರ ಮಾತ್ರ ಇನ್ನೂ ಬಂದಿಲ್ಲ ಎಂದು ಹುಳಿಮಾವು ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಪ್ರತಿಭಟನೆಗೂ ಮುನ್ನವೇ ಸ್ಥಳಕ್ಕೆ ಶಾಸಕ ಸತೀಶ್ ರೆಡ್ಡಿ ಮತ್ತು ಸ್ಥಳೀಯ ಕಾರ್ಪೋರೇಟರ್ ಭಾಗ್ಯಲಕ್ಷ್ಮಿ ಮುರಳಿ ಧಾವಿಸಿ ಜನರಿಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ನಾವು ಪ್ರತಿಯೊಬ್ಬರಿಗೂ ಪರಿಹಾರ ಕೊಡಬೇಕು ಎಂದು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದೇವೆ. ಇಂದು ಪ್ರತಿಯೊಬ್ಬರ ಅಕೌಂಟಿಗೆ 50,000 ದುಡ್ಡು ಜಮಾ ಆಗಲಿದೆ. ವಾಹನಗಳ ವಿಚಾರವಾಗಿ ನಾವು ಸರ್ಕಾರದ ಬಳಿ ಚರ್ಚಿಸಿ ನಿಮಗೆ ನಿಮ್ಮ ವಾಹನಗಳ ರಿಪೇರಿಯ ಜವಾಬ್ದಾರಿಯನ್ನ ಇನ್ಶೂರೆನ್ಸ್ ಕಂಪನಿಗಳ ಮೂಲಕ ಮಾಡಿಸುತ್ತೇವೆ ಎಂದು ಶಾಸಕರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯರು, ನಾವು ಈ ಹೋರಾಟವನ್ನು ನ್ಯಾಯ ಸಿಗುವವರೆಗೂ ಕೈ ಬಿಡುವುದಿಲ್ಲ. ನಮ್ಮ ವಾಹನಗಳು ಸಂಪೂರ್ಣ ಹಾಳಾಗಿವೆ. ಸರ್ಕಾರ ಖುದ್ದು ವಿಮಾ ಕಂಪೆನಿಗಳಿಗೆ ಹೇಳಿ ಶುಲ್ಕ ರಹಿತ ರಿಪೇರಿ ಮಾಡಿಸಿ ಕೊಡಬೇಕು ಎಂದು ಆಗ್ರಹಿಸಿದರು. ಪರಿಹಾರ ಸಿಗದೇ ಹೋದರೆ ಕಾನೂನು ರೀತಿಯಲ್ಲಿ ಹೋರಾಡಬೇಕಾಗುತ್ತದೆ ಎಂದು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.