ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ಆರಂಭವಾದ ಬಳಿಕ ಇದುವರೆಗೆ 1,568 ಎಫ್ಐಆರ್ ದಾಖಲಾಗಿದ್ದು, 1,541 ಸರ್ಕಾರಿ ಅಧಿಕಾರಿಗಳು ಹಾಗೂ ಇತರರನ್ನು ಬಂಧಿಸಲಾಗಿದೆ. 1,199 ಅಧಿಕಾರಿಗಳ ಮೇಲೆ ವಿವಿಧ ಇಲಾಖೆಗಳಿಂದ ವರದಿ ಸಲ್ಲಿಸಿ ಸೇವೆಯಿಂದ ಅಮಾನತ್ತಿಗೆ ಒಳಪಡಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
940 ಆರೋಪಿತ ಸರ್ಕಾರಿ ಅಧಿಕಾರಿಗಳ ಮೇಲೆ ಇಲಾಖೆ ವಿಚಾರಣೆ ಕೈಗೊಳ್ಳುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಫ್ಐಆರ್ ದಾಖಲಿಸಿದ ಪ್ರಕರಣಗಳ ಪೈಕಿ 815 ಅಧಿಕಾರಿಗಳ ಮೇಲೆ ರಾಜ್ಯದ 35 ವಿಶೇಷ ನ್ಯಾಯಾಲಯಗಳಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಕೆಲ ವ್ಯಕ್ತಿಗಳ ಮೇಲೆ ನ್ಯಾಯಾಲಯಗಳಲ್ಲಿ ವಿಚಾರಣೆಯು ವಿವಿಧ ಹಂತಗಳಲ್ಲಿ ನಡೆಯುತ್ತಿದೆ. ಎಸಿಬಿ ಇತ್ತೀಚಿನ ವರ್ಷಗಳಲ್ಲಿ ಆರಂಭವಾಗಿರುವ ಸಂಸ್ಥೆಯಾಗಿರುವುದರಿಂದ ಕೆಲವು ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯಗಳಲ್ಲಿ ವಿಚಾರಣೆ ಪೂರ್ಣಗೊಂಡಿದೆ. ಇವುಗಳ ಪೈಕಿ 3 ಪ್ರಕರಣಗಳಲ್ಲಿ ಸಜೆ ಘೋಷಣೆ ಆಗಿದೆ. 557 ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದು, ಈ ಪ್ರಕರಣಗಳು ಇತ್ಯರ್ಥವಾಗಲು ಕಾಲಾವಕಾಶ ಬೇಕಾಗುತ್ತದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾರ್ವಜನಿಕರು ಯಾವುದೇ ಭಯ-ಭೀತಿಯಿಲ್ಲದೇ ದೂರುಗಳನ್ನು ದಾಖಲಿಸಲು 1064 ಉಚಿತ ಸಹಾಯವಾಣಿ ಆರಂಭಿಸಲಾಗಿದೆ. ಭ್ರಷ್ಟಾಚಾರ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಾಂತ ವಿವಿಧ ದರ್ಜೆಯ ಅಧಿಕಾರಿಗಳಿಂದ 4,219 ಜನ ಸಂಪರ್ಕ ಸಭೆ ನಡೆಸಲಾಗಿದೆ. ಈ ಸಭೆಗಳಲಿ ಭಾಗವಹಿಸಿದ ಸಾರ್ವಜನಿಕರು ಮತ್ತು ಇತರರು ನೀಡುವ ಮಾಹಿತಿ ಆಧರಿಸಿ 133 ಕಚೇರಿಗಳಲ್ಲಿ ಶೋಧನೆ ನಡೆಸಿ 17.29 ಕೋಟಿ ರೂ. ಹಾಗೂ ಅಕ್ರಮ ದಾಖಲಾತಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸಲು 10 ಜನ ಕಾನೂನು ತಜ್ಞರ ತಂಡವನ್ನು ಹೊಂದಿದೆ.
ತನಿಖಾ ಹಂತದಲ್ಲಿವೆ 7 ಪ್ರಕರಣಗಳು...
ಟಿಡಿಆರ್ ವಿತರಣೆ ಕುರಿತು ದಾಖಲಾಗಿರುವ ಪ್ರಕರಣಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಅಕ್ರಮವಾಗಿ 150 ಕೋಟಿ ರೂ. ಮೌಲ್ಯದ 16 ಲಕ್ಷ ಚ.ಅಡಿ ವಿಸ್ತೀರ್ಣವನ್ನು ವಿತರಣೆ ಮಾಡಿರುವ ಬಗ್ಗೆ ಒಟ್ಟು 10 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ 15 ಸರ್ಕಾರಿ ಅಧಿಕಾರಿಗಳು ಹಾಗೂ 59 ಖಾಸಗಿ ವ್ಯಕ್ತಿಗಳ ವಿರುದ್ಧ ತನಿಖೆ ಕೈಗೊಳ್ಳಲಾಗಿದೆ. 3 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದು ಉಳಿದ 7 ಪ್ರಕರಣಗಳು ತನಿಖೆಯಲ್ಲಿವೆ.