ಬೆಂಗಳೂರು: ನಗರದಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ನೆಲಕ್ಕುರುಳುತ್ತಿವೆ. ಇಂದು ಬೆಳಗ್ಗೆ ಕಮಲಾನಗರದಲ್ಲಿ ಕಟ್ಟಡವೊಂದರ ತಳಪಾಯ ಕುಸಿದ ಬೆನ್ನಲ್ಲೇ ಮತ್ತೊಂದೆಡೆ ನಗರತ್ ಪೇಟೆಯಲ್ಲಿ ಹೆಂಚಿನ ಮನೆನೊಂದರ ಗೋಡೆ ಕುಸಿದಿದೆ.
ವಾರ್ಡ್ 119, 2ನೇ ಅಡ್ಡರಸ್ತೆ, ಪಿವಿಎನ್ ಲೇನ್ ನಗರತ್ ಪೇಟೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಹೆಂಚಿನ ಮನೆ (ಮಂಗಳೂರು ಟೈಲ್ಸ್ ಮನೆ)ಯ ಒಂದು ಗೋಡೆ ಕುಸಿದು ಬಿದ್ದಿದೆ. ಕಳೆದ ಆರು ವರ್ಷಗಳಿಂದ ಈ ಮನೆ ಪಾಳು ಬಿದ್ದಿದ್ದು, ಯಾರೂ ವಾಸಿಸುತ್ತಿರಲಿಲ್ಲ. ಈ ಹಿನ್ನೆಲೆ ಯಾರಿಗೂ ಸಮಸ್ಯೆಯಾಗಿಲ್ಲ. ಕಟ್ಟಡದ ಅವಶೇಷಗಳನ್ನು ತೆರವು ಮಾಡಲು ಬಿಬಿಎಂಪಿ ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವಾಲಿದ ಮತ್ತೊಂದು ಕಟ್ಟಡ, ಬೇರೆ ಕಟ್ಟಡಕ್ಕೆ ಹಾನಿಯಾಗದಂತೆ ತೆರವು ಕಾರ್ಯ: ಸಚಿವ ಕೆ.ಗೋಪಾಲಯ್ಯ
ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಮುಂದಿನ 3 ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.