ಬೆಂಗಳೂರು: ನೀವು ಯಾವತ್ತಾದ್ರೂ ಸ್ಮಶಾನದ ಮುಂದೆ ಹೌಸ್‌ಫುಲ್ ಬೋರ್ಡ್ ಹಾಕಿರುವುದನ್ನು ನೋಡಿದ್ದೀರಾ?.
ಬೆಂಗಳೂರಿನ ಚಿತಾಗಾರದ ಮುಂದೆ ಹೌಸ್ಪುಲ್ ಬೋರ್ಡ್ ಹಾಕಲಾಗಿದೆ. ಇದು ನಿಜಕ್ಕೂ ದುರಂತವೇ ಸರಿ. ಸರ್ಕಾರದ ನಿರ್ಲಕ್ಷ್ಯವೋ ಅಥವಾ ಜನರ ಹಣೆಬರಹವೋ ಗೊತ್ತಿಲ್ಲ. ಮರಣದ ನಂತರವೂ ಚಿತಾಗಾರದ ಮುಂದೆ ಕ್ಯೂ ನಿಲ್ಲುವ ದಯನೀಯ ಪರಿಸ್ಥಿತಿ ಬಂದೊದಗಿದೆ. ಶವಗಳ ರಾಶಿಯೇ ಇದ್ದು ಸುಡುವುದಕ್ಕೆ ಕಾಯಬೇಕಿದೆ ಎಂಬುದನ್ನು ಈ ಬೋರ್ಡ್ ಸೂಚಿಸುತ್ತದೆ.
ಚಾಮರಾಜಪೇಟೆಯ ಟಿಆರ್ಮಿಲ್ ಸಮೀಪದ ಸ್ಮಶಾನದಲ್ಲಿಶವಗಳು ಭರ್ತಿಯಾಗಿದ್ದು, ದಹಿಸಲು ಸಾಧ್ಯವಿಲ್ಲ ಎಂಬಂತಾಗಿದೆ. ಹೀಗಾಗಿ ಇಲ್ಲಿನ ಸಿಬ್ಬಂದಿ ಹೌಸ್‌ಫುಲ್ ಬೋರ್ಡ್ ನೇತು ಹಾಕಿದ್ದಾರೆ.
ನಿನ್ನೆ ಭಾನುವಾರ ಕೋವಿಡ್ನಿಂದ ಮೃತರಾದ 45 ಮೃತದೇಹಗಳ ಅಂತ್ಯಕ್ರಿಯೆ ನಡೆದಿದೆ. ಈಗಾಗಲೇ 19 ಮೃತದೇಹಗಳು ದಹನಕ್ಕೆ ಬುಕ್ಕಿಂಗ್ ಆಗಿವೆ. ದಿನಕ್ಕೆ 20 ಮೃತದೇಹಗಳ ಅಂತ್ಯಕ್ರಿಯೆಗೆ ಇಲ್ಲಿ ಅವಕಾಶವಿದೆಯಂತೆ. ಈಗಾಗಲೇ ಮೃತದೇಹ ದಹನದ ಬುಕ್ಕಿಂಗ್ ಹೆಚ್ಚಾಗಿರುವುದರಿಂದ ಚಿತಾಗಾರದ ಮುಂದೆ ಸಿಬ್ಬಂದಿ ಈ ಫಲಕ ಹಾಕಬೇಕಾಗಿ ಬಂದಿದೆ.
ಹೀಗಾಗಿ, ಮೃತರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸ್ಮಶಾನದಿಂದ ಸ್ಮಶಾನಕ್ಕೆ ಪರದಾಡಬೇಕಾದ ಪರಿಸ್ಥಿತಿ ಉದ್ಬವಿಸಿದೆ.