ಬೆಂಗಳೂರು: ನಂದಿನಿ ಹಾಲು, ಮೊಸರು ದರ ಏರಿಸಿ ಕೆಎಂಎಫ್ ಶಾಕ್ ನೀಡಿದ ಬೆನ್ನಲ್ಲೇ ಹೋಟೆಲ್ ಮಾಲೀಕರು ಕೂಡ ಟೀ, ಕಾಫಿ, ಊಟ, ತಿಂಡಿಯ ಬೆಲೆ ಏರಿಸುವ ಸಾಧ್ಯತೆ ಇದೆ.
ಆಹಾರದ ದರ ಏರಿಸಲು ಹೋಟೆಲ್ ಮಾಲಿಕರ ಸಂಘ ಚಿಂತನೆ ನಡೆಸಿದ್ದು, ಈ ಕುರಿತು ತೀರ್ಮಾನಿಸಲು ನವೆಂಬರ್ 18 ರಂದು ಸಭೆ ಕರೆದಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಸಿಲಿಂಡರ್ ಬೆಲೆ ಏರಿಕೆ ಆದಾಗಲೇ ಹೋಟೆಲ್ ದರ ಏರಿಕೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಆಗ ಕೆಲ ಹೋಟೆಲ್‌ಗಳು ಮಾತ್ರ ದರ ಏರಿಸಿದ್ದವು. ಈಗ ಎಲ್ಲ ಹೋಟೆಲ್‌ಗಳಿಗೆ ಅನ್ವಯವಾಗುವಂತೆ ದರ ಏರಿಕೆ ಮಾಡಲು ಚಿಂತನೆ ನಡೆಸಲಾಗಿದ್ದು, ಸಭೆಯಲ್ಲಿ ಈ ಕುರಿತು ಚರ್ಚಿಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಹೋಟೆಲ್ ಮಾಲಿಕರ ಸಂಘ ತಿಳಿಸಿದೆ.
ಏಪ್ರಿಲ್‌ನಲ್ಲಿ ನಡೆದ ಸಭೆಯಲ್ಲಿ ಹೋಟೆಲ್‌ಗಳಲ್ಲಿ ಊಟ, ತಿಂಡಿ ದರಗಳನ್ನು ಶೇ.10ರಷ್ಟು ಏರಿಕೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಕೆಲವು ದೊದ್ದ ಹೋಟೆಲ್ ಮಾಲಿಕರು ಹೊಸ ದರ ಜಾರಿಗೊಳಿಸಿದರು. ಕೆಲವು ಹೋಟೆಲ್‌ಗಳು ದರ ಏರಿಕೆ ಮಾಡಲಿಲ್ಲ. ಈಗ ಎಲ್ಲ ಹೋಟೆಲ್‌ಗಳು ದರ ಏರಿಕೆ ಮಾಡುವ ನಿರೀಕ್ಷೆ ಇದೆ. ಅಲ್ಲದೇ ಕೆಎಂಎಫ್ ನಂದಿನಿ ಹಾಲಿನ ದರ ಏರಿಕೆ ಮಾಡಿದ್ದರಿಂದ ಕಾಫಿ, ಟೀ ದರ ಸಹ ಏರಿಕೆ ಮಾಡುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಂಘ ತಿಳಿಸಿದೆ.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಳ ಮಾಡಿ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್ ನೀಡಿದೆ. ನಾಳೆಯಿಂದಲೇ ಜಾರಿಗೆ ಬರುವಂತೆ ಪ್ರತಿ ಲೀಟರ್ಗೆ 3 ರೂಪಾಯಿ ಏರಿಕೆ ಮಾಡಿದೆ.
ಟೋನ್ಡ್ ಹಾಲಿನ ದರ ಪ್ರತಿ ಲೀಟರ್ಗೆ 37 ರಿಂದ 40 ರೂ, ಸ್ಪೆಷಲ್ ಹಾಲಿನ ದರ 43 ರಿಂದ 46 ರೂಪಾಯಿ, ಶುಭಂ ಹಾಲಿನ ದರ 43 ರಿಂದ 46 ರೂ, ಸಮೃದ್ಧಿ ಹಾಲಿನ ದರ 48 ರಿಂದ 51 ರೂ ಹಾಗೂ ಮೊಸರಿನ ದರ 45 ರಿಂದ 48 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ
ಇದನ್ನು ಓದಿ: ಜನರಿಗೆ ಬೆಲೆ ಏರಿಕೆ ಶಾಕ್.. ನಂದಿನಿ ಹಾಲು, ಮೊಸರಿನ ದರದಲ್ಲಿ ಏರಿಕೆ