ಬೆಂಗಳೂರು: ಲಾಕ್‌ಡೌನ್ ಸಡಿಲಿಕೆಗೊಂಡು ತಿಂಗಳು ಕಳೆದರೂ ಹೋಟೆಲ್ ಉದ್ಯಮ ಚೇತರಿಸಿಕೊಂಡಿಲ್ಲ. ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ಹೋಟೆಲ್‌ಗಳಲ್ಲೀಗ ಬೆರಳೆಣಿಕೆಯಷ್ಟು ಆಸನಗಳು ಮಾತ್ರ ಕಾಣಸಿಗುತ್ತಿವೆ.
ಕೊರೊನಾದಿಂದ ವ್ಯಾಪಾರ-ವಹಿವಾಟು ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ಉದ್ಯಮಿಗಳು, ಲಾಕ್ಡೌನ್ ಸಡಿಲಿಕೆ ಬಳಿಕ ಉದ್ಯಮ ಪ್ರಗತಿಯ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನಿತ್ಯದ ವಹಿವಾಟು ಆರಕ್ಕೇರಿಲ್ಲ, ಮೂರಕ್ಕಿಳಿದಿಲ್ಲ ಎನ್ನುವಂತಾಗಿದೆ. ಮಾಲೀಕರಿಗೆ ಆರ್ಥಿಕ ನಷ್ಟ ಕಾಡುತ್ತಿದೆ.
ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಿಂದ ಹೋಟೆಲ್ ಉದ್ಯಮ ಅಲ್ಪ ಚೇತರಿಕೆ ಕಂಡಿದೆ. ಆದರೆ, ಪೂರ್ತಿಯಾಗಿ ಸುಧಾರಣೆಯಾಗಿಲ್ಲ. ಅನ್ಲಾಕ್ ನಂತರ ವ್ಯಾಪಾರದಲ್ಲಿ ಶೇ. 30ರಷ್ಟು ಅಭಿವೃದ್ಧಿ ಕಂಡಿದ್ದರೂ ಆದಾಯ ಖರ್ಚಿಗೆ ಸರಿದೂಗುವಂತಾಗಿದೆ. ಹೋಟೆಲ್ ರೂಮ್ ಬುಕ್ಕಿಂಗ್, ಪಾರ್ಟಿ ಹಾಲ್ಗಳ ಬೇಡಿಕೆ ಇಲ್ಲದಂತಾಗಿದೆ.
ಮೈಸೂರು ನಗರದಲ್ಲಿ ಲಾಕ್ಡೌನ್ ನಂತರ ಕೇವಲ 50% ಹೋಟೆಲ್ಗಳು ಮಾತ್ರ ಪುನಾರಂಭವಾಗಿದ್ದು, ಕೇವಲ 25%ರಷ್ಟು ವ್ಯವಹಾರ ಆಗುತ್ತಿದೆ. ಹೋಟೆಲ್ ಬಾಡಿಗೆ, ತೆರಿಗೆ ಹಾಗೂ ಇತರೆ ಖರ್ಚುಗಳನ್ನು ಸರಿದೂಗಿಸಲು ಕಷ್ಟವಾಗಿದೆ. ಹೋಟೆಲ್ ಉದ್ಯಮ ಚೇತರಿಸಿಕೊಳ್ಳಲು ಮುಂದಿನ ವರ್ಷ ಮಾರ್ಚ್ವರೆಗೆ ಸಮಯ ಬೇಕು. ಅದು ಕೂಡ ಗ್ಯಾರಂಟಿ ಇಲ್ಲ ಎನ್ನುತ್ತಾರೆ ಹೋಟೆಲ್ ಮಾಲೀಕರು.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾದಿಂದ ವ್ಯಾಪಾರವಿಲ್ಲದೇ ಕಂಗೆಟ್ಟಿದ್ದ ಹೋಟೆಲ್ ಉದ್ಯಮಿಗಳು, ಲಾಕ್ಡೌನ್ ಸಡಿಲಿಕೆ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ. ಗ್ರಾಹಕರು ಹೋಟೆಲ್, ರೆಸಾರ್ಟ್ ಹಾಗೂ ರೆಸ್ಟೋರೆಂಟ್‍ಗಳತ್ತ ಮುಖ ಮಾಡುತ್ತಿದ್ದು, ಹೋಟೆಲ್ ಮಾಲೀಕರ ಮೊಗದಲ್ಲಿ ಸಂತಸ ಮೂಡಿದೆ. ಶೇ. 50ರಷ್ಟು ಜನರು ಹೋಟೆಲ್‍ಗಳಿಗೆ ಬರುತ್ತಿದ್ದು, ಹೋಟೆಲ್ ಮಾಲೀಕರು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರೆ.
ದಾವಣಗೆರೆಯಲ್ಲಿ ಹೋಟೆಲ್ ಉದ್ಯಮ ಚೇತರಿಸಿಕೊಂಡಿಲ್ಲ. ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ಮುಚ್ಚುವ ಸ್ಥಿತಿಗೆ ಬಂದು ತಲುಪಿವೆ. ಬೆಣ್ಣೆ ದೋಸೆಗೆ ಹೆಸರುವಾಸಿಯಾಗಿರುವ ದಾವಣಗೆರೆಯಲ್ಲಿ ಸುಮಾರು 50 ರಿಂದ 60 ಬೆಣ್ಣೆ ದೋಸೆ ಹೋಟೆಲ್ಗಳಿವೆ. ಆದರೆ, ವ್ಯಾಪಾರವಿಲ್ಲದೇ ನಷ್ಟ ಅನುಭವಿಸಿರುವ ಮಾಲೀಕರು, ಹೋಟೆಲ್ಗಳನ್ನು ಬಂದ್ ಮಾಡುವ ಸ್ಥಿತಿಯಲ್ಲಿದ್ದಾರೆ.
ಕೊರೊನಾ ಸೃಷ್ಟಿಸಿದ ಅವಾಂತರದಿಂದ, ಹೋಟೆಲ್ ಉದ್ಯಮಿಗಳು ಹಾಗೂ ಕೆಲಸಗಾರರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ಕೆಲವೆಡೆ ಐದಾರು ತಿಂಗಳಿಂದ ಎಳೆದ ಹೋಟೆಲ್‌ಗಳ ಬಾಗಿಲು ಈವರೆಗೆ ತೆರೆದಿಲ್ಲ. ಹೋಟೆಲ್ ಉದ್ಯಮ ಪೂರ್ತಿಯಾಗಿ ಚೇತರಿಸಿಕೊಳ್ಳಲು ಇನ್ನಷ್ಟು ಕಾಲ ಸಮಯಬೇಕಿದೆ.