ಬೆಂಗಳೂರು: ಅನ್ಲಾಕ್ ನಂತರ ಆಗಸ್ಟ್ ತಿಂಗಳಿಂದ ಹೋಟೆಲ್ ಉದ್ಯಮ ಅಲ್ಪ ಚೇತರಿಕೆ ಕಾಣುತ್ತಿದೆ. ಆದರೆ, ಪೂರ್ಣ ಸುಧಾರಣೆ ಆಗಿಲ್ಲ ಎಂದು ನಗರದ ಹಲವು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ.
ಅನ್ಲಾಕ್ ನಂತರ ಶೇ 30ರಷ್ಟು ವ್ಯಾಪಾರದಲ್ಲಿ ಅಭಿವೃದ್ಧಿ ಕಂಡಿದ್ದು, ಆದಾಯ ಹಾಗೂ ವ್ಯಯಕ್ಕೂ ಸರಿದೂಗುತ್ತಿದೆ. ಅತ್ತ ನಷ್ಟವಾಗದೇ ಇತ್ತ ಲಾಭ ಕೂಡಾ ಬರದೆ ಸುಧಾರಣೆ ಆಗುತ್ತಿದೆ ಎಂದು ಸಾಮ್ರಾಟ್ ಹೋಟೆಲ್ ಮಾಲೀಕ ರವಿ ಹೇಳಿದರು.
ಇನ್ನು ನಗರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್ ಈಟಿವಿ ಭಾರತದ ಜೊತೆ ಮಾತನಾಡಿ, ಹೋಟೆಲ್ ಉದ್ಯಮ ಪ್ರಗತಿ ಕಾಣುತ್ತಿದೆ. ಆದರೆ, ರೂಮ್ ಬುಕ್ಕಿಂಗ್ ಪಾರ್ಟಿಹಾಲ್ಗಳ ಬೇಡಿಕೆ ಇಲ್ಲ, ಪ್ರವಾಸೋದ್ಯಮ ಹೆಚ್ಚು ಕಡಿಮೆ ಸ್ಥಗಿತವಾಗಿದೆ ಹಾಗೂ ಐಟಿಬಿಟಿ ಸಂಸ್ಥೆಗಳು ಕಚೇರಿ ತೆರೆಯದೇ ಇರುವ ಕಾರಣ ಹೋಟೆಲ್ನ ರೂಮ್ಗಳು ಹಾಗೂ ಹಾಲ್ ಬಾಡಿಗೆಗೆ ಬೇಡಿಕೆ ಇಲ್ಲ ಎಂದರು.
ಕೊರೊನಾ ಸೋಂಕು 70 ಡಿಗ್ರಿ ಮೇಲೆ ಊಟ ತಯಾರಿಸಿದರೆ ಬರುವುದಿಲ್ಲ, ಆದರೆ, ಹೋಟೆಲ್ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಇದಕ್ಕೆ ನಗರದ ಹೋಟೆಲ್ಗಳಿಗೆ ಹಾಗೂ ಕೆಲಸಗಾರರಿಗೆ ಫಿಕ್ಕಿ ವತಿಯಿಂದ ತರಬೇತಿ ನೀಡಿದ್ದೇವೆ ಎಂದು ತಿಳಿಸಿದರು.
ಇದರ ಜೊತೆಗೆ ಎಲ್ಲ ಹೋಟೆಲ್ಗಳಲ್ಲಿ ಸ್ಯಾನಿಟೈಸರ್ ಕಡ್ಡಾಯವಾಗಿ ಇರುತ್ತದೆ ಹಾಗೂ ಡಿಜಿಟಲ್ ಪೇಮೆಂಟ್ಗೆ ಒತ್ತು ನೀಡಿದ್ದೇವೆ. ಊಟ ನೀಡುವ ತಟ್ಟೆ ಲೋಟಗಳನ್ನ ಬಿಸಿ ನೀರಿನಿಂದ ತೊಳೆಯುವುದಕ್ಕೂ ಸಲಹೆ ನೀಡಿದ್ದೇವೆ ಎಂದು ಹೇಳಿದರು.
ಸದ್ಯಕ್ಕೆ ರಾತ್ರಿ ಊಟಕ್ಕೆ ಜನರು ಹೆಚ್ಚು ಹೋಟೆಲ್ ಮೊರೆ ಹೋಗದ ಜನ, ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನ ಊಟಕ್ಕೆ ಮಾತ್ರ ಬರುತ್ತಿದ್ದಾರೆ. ಹಾಗೂ ನಗರದ ಹೆಚ್ಚಿನ ಹೋಟೆಲ್ಗಳಲ್ಲಿ ಕಾಫಿ ಟಿ ಜತೆ ಕಷಾಯವನ್ನು ಪರಿಚಯಿಸಿದ್ದಾರೆ. ರೋಗ - ನಿರೋಧಕ ಶಕ್ತಿಗಾಗಿ ಜನರು ಈಗ ಕಷಾಯದ ಸೇವನೆ ಕೂಡ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಹೋಟೆಲ್ ಮಾಲೀಕರು ಕಷಾಯ ಮಾರುತ್ತಿದ್ದಾರೆ.
ಒಟ್ಟಾರೆ ಸುಧಾರಣೆ ಹಾದಿಯಲ್ಲಿ ಇರುವ ಹೋಟೆಲ್ ಉದ್ಯಮ ಇನ್ನು ಐಟಿಬಿಟಿ ಸಂಸ್ಥೆಗಳ ಕಚೇರಿ ತೆಗೆದರೆ ಹಾಗೂ ಪ್ರವಾಸೋದ್ಯಮ ಪ್ರಾರಂಭವಾದರೆ ಮಾತ್ರ ಸಹಜ ಆದಾಯಕ್ಕೆ ತಲುಪುತ್ತದೆ ಎಂದು ಮಾಲೀಕರ ಅಭಿಪ್ರಾಯವಾಗಿದೆ.