ಬೆಂಗಳೂರು: ಹೊಯ್ಸಳ, ದ್ವಿಚಕ್ರ ವಾಹನಗಳು ಮಾತ್ರವಲ್ಲದೆ ನಗರದಲ್ಲಿ ಇನ್ನು ಮುಂದೆ ನೀವು ಅಶ್ವಾರೋಹಿ ಸಿಬ್ಬಂದಿ ಗಸ್ತು ತಿರುಗುವ ದೃಶ್ಯಗಳನ್ನು ಕಾಣಬಹುದಾಗಿದೆ. ಜನನಿಬಿಡ ಸ್ಥಳಗಳಲ್ಲಿ ಹೆಚ್ಚಿನ ನಿಗಾವಹಿಸಲು ಈ ಅಶ್ವದಳ ಬಳಕೆ ಮಾಡುವ ಯೋಜನೆಯನ್ನು ನಗರ ಪೊಲೀಸ್ ಇಲಾಖೆಯಲ್ಲಿ ಆರಂಭಿಸಲಾಗಿದೆ. ಜನಸಂದಣಿ ಅಧಿಕವಿರುವ ಸ್ಥಳಗಳಲ್ಲಿ ಹೆಚ್ಚಿನ ನಿಗಾವಹಿಸುವ ಉದ್ದೇಶದಿಂದ ಈ ಹಿಂದೆ ಇದ್ದ ಅಶ್ವಾರೋಹಿ ಸಿಬ್ಬಂದಿ ಗಸ್ತು ವ್ಯವಸ್ಥೆಗೆ ಮರುಚಾಲನೆ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ತಿಳಿಸಿದ್ದಾರೆ.
ನಗರದಲ್ಲಿ ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಎತ್ತರದ ಸ್ಥಳದಿಂದ ಹೆಚ್ಚಿನ ನಿಗಾವಹಿಸಲು ಸಾಧ್ಯವಾದ್ದರಿಂದ ಕುದುರೆಗಳ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ವಾರಾಂತ್ಯದಲ್ಲಿ ಹೆಚ್ಚು ಜನ ಸೇರುವ ಕಬ್ಬನ್ ಪಾರ್ಕ್, ವಿಧಾನಸೌಧ, ಮೆಜೆಸ್ಟಿಕ್, ಎಂ ಜಿ ರಸ್ತೆಯಂಥಹ ಸ್ಥಳಗಳಲ್ಲಿ ಅಶ್ವಾರೋಹಿ ಸಿಬ್ಬಂದಿ ಗಸ್ತು ತಿರುಗಲಿದ್ದಾರೆ. ಜನಸಮೂಹದ ನಡುವೆ ಅನುಚಿತವಾಗಿ ವರ್ತಿಸುವವರು, ಅಪರಾಧ ಕೃತ್ಯಗಳನ್ನು ಎಸಗುವವರ ಮೇಲೆ ಹದ್ದಿನ ಕಣ್ಣಿಡುವ ಮೂಲಕ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ಮೈಸೂರು ನಗರದಲ್ಲಿ ಪೊಲೀಸ್ ಇಲಾಖೆಯ ಅಧೀನದಲ್ಲಿ ಒಂದು ಕಂಪನಿಯ ಕುದುರೆಗಳನ್ನು ಗಸ್ತಿಗಾಗಿ ಬಳಸಿಕೊಳ್ಳಲಾಗುತ್ತಿದ್ದು, ಎಸ್.ಪಿ ದರ್ಜೆಯ ಅಧಿಕಾರಿಯೊಬ್ಬರು ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈಗ ಅದರ ಒಂದು ಘಟಕ ಬೆಂಗಳೂರಿನಲ್ಲಿಯೂ ಕಾರ್ಯ ನಿರ್ವಹಿಸಲಿದ್ದು, ಕಾನೂನು ಸುವ್ಯವಸ್ಥೆ ಪೊಲೀಸ್ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಮಂಡ್ಯ ಮಗು ಮಿಸ್ಸಿಂಗ್: ಮಹಿಳೆಯ ಹೈಡ್ರಾಮಾ, ಪೊಲೀಸ್ ತನಿಖೆಯಲ್ಲಿ ಟ್ವಿಸ್ಟ್