ಬೆಂಗಳೂರು: ರೈತನ ಜೊತೆಗಾರ, ಕೃಷಿ ಕ್ಷೇತ್ರದ ಬಹು ದೊಡ್ಡ ಪಾಲುದಾರವಾಗಿರುವ ಜೇನುನೊಣಗಳು ದಿನೇ ದಿನೆ ನಗರೀಕರಣವಾದಂತೆ ನಶಿಸುವ ಹಂತಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಪರಿಸರವಾದಿಗಳಿಂದ ಜೇನುನೊಣ ಸಂರಕ್ಷಣೆಯ ಕೂಗು ಕೇಳಿ ಬರುತ್ತಿದೆ.
ಹೌದು, ಜೇನುನೊಣಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಆತಂಕಗೊಂಡಿರುವ ಪರಿಸರವಾದಿಗಳು ಜೇನುನೊಣವನ್ನು ರಾಜ್ಯ ಕೀಟವಾಗಿ ಮಾಡಿ ಆ ಮೂಲಕ ಒಂದು ಕಠಿಣ ಕಾನೂನು ತರುವಂತೆ ಸರ್ಕಾರಕ್ಕೆ ಕರೆ ನೀಡುತ್ತಿದ್ದಾರೆ.
ಹಿಂದೆಯೂ ಈ ವಿಚಾರವಾಗಿ ಸಾಕಷ್ಟು ತಜ್ಞರು ಎಚ್ಚರಿಕೆ ನೀಡಿದರು. ಜೇನುನೊಣಗಳಿಂದ ನೈಸರ್ಗಿಕವಾಗಿ ನಡೆಯುತ್ತಿದ್ದ ಪ್ರಕ್ರಿಯೆಯನ್ನ ಈಗ ನಾವೇ ಸೃಷ್ಟಿ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅಂದ ಹಾಗೇ ಜೇನುನೊಣಗಳ ಉಳಿಯುವಿಕೆ ಬಹಳ ಮುಖ್ಯವಾದದು. ಕೃಷಿಕರಿಗೆ ಕೃಷಿ ಕೆಲಸದಲ್ಲಿ ಉತ್ತಮ ಪಾತ್ರವಹಿಸುವುದೇ ಈ ಜೇನುನೊಣಗಳು. ಇದೀಗ ಜೇನುಹುಳುಗಳು ಕಣ್ಮರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಚ್ಚರಿಯಾದರೂ ಇದು ಸತ್ಯ. ಮಾರುಕಟ್ಟೆಯಲ್ಲಿ ಜೇನುತುಪ್ಪಕ್ಕೆ ಸಾಕಷ್ಟು ಬೇಡಿಕೆ ಇದೆ. ಇತ್ತೀಚೆಗೆ ಜೇನುಹನಿ ಡಯಟ್ ಫುಡ್ಗಳಲ್ಲಿ ಮುಖ್ಯ ಪಾತ್ರವಹಿಸುತ್ತಿದೆ ಎಂದು ಅರಿತ ಕಂಪನಿಗಳು, ಇದನ್ನೇ ಬಂಡವಾಳ ಮಾಡಿಕೊಂಡು ಜಾಹೀರಾತಿನ ಮೂಲಕ ಕಾಡಿನಲ್ಲಿ ಸಂಗ್ರಹಿಸಿರುವ ಜೇನು ಲಭ್ಯ ಎಂದು ಜಾಹೀರಾತು ನೀಡುತ್ತಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಬೇಡಿಕೆ ಹೆಚ್ಚಾದಂತೆ ಹಲವರು ಕಾಡಿಗೆ ನುಗ್ಗಿ ಜೇನು ಸಂಗ್ರಹಿಸಿ ಮಾರುಕಟ್ಟೆಗೆ ನೀಡಲು ಮುಂದಾಗಿದ್ದಾರೆ. ಜೇನು ತೆಗೆಯುವಾಗ ಸರಿಯಾದ ವಿಧಾನ ಗೊತ್ತಿರದೇ ಜೇನುನೊಣಗಳಿಗೆ ಹಾನಿ ಮಾಡಲಾಗುತ್ತಿದೆ. ಆದ್ದರಿಂದ ಜೇನುನೊಣಗಳ ಉಳಿಯುವಿಕೆಗೆ ಮುಖ್ಯವಾಗಿ ಕಾಡಿನಲ್ಲಿ ಜೇನು ತೆಗೆಯುವುದನ್ನ ನಿಷೇಧಿಸಬೇಕು. ಆದಷ್ಟು ಜೇನುಪೆಟ್ಟಿಗೆ ಕ್ರಮಕ್ಕೆ ಪ್ರೋತ್ಸಾಹಿಸುವುದರಿಂದ ನೊಣಗಳ ಸಂತತಿ ಉಳಿಯಲು ಸಾಧ್ಯ ಅಂತಾರೆ ತಜ್ಞರು.
1980 ರಲ್ಲಿ ನಾಶವಾಗಿತ್ತು ಜೇನುನೊಣಗಳು:
1980 ರಲ್ಲಿ ತಾಥಯ್ ಸಾಕ್ ಬ್ರೂಡ್ ಎಂಬ ಕಾಯಿಲೆ ಬಂದು ಸಾಕಷ್ಟು ಜೇನುಹುಳುಗಳು ನಾಶವಾಗಿದ್ದವು. ಮೈಸೂರು, ಕೊಡಗು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಸತ್ತುಹೋಗಿದ್ದವು. ನಂತರದ ದಿನಗಳಲ್ಲಿ ಮತ್ತೆ ಸಂತತಿ ಹೆಚ್ಚಿತ್ತು. ಆದರೆ, ಈಗ ಇಡೀ ಪ್ರಪಂಚದಲ್ಲಿ ಜೇನುನೊಣಗಳಿಗೆ ಬಾಧಿಸುವ ಕಾಲೋನಿ ಕೊಲೊಪ್ಸ್ ಡಿಸಾರ್ಡರ್ ಎಂಬ ಕಾಯಿಲೆ ಬಂದಿದ್ದು, ಈ ಕಾಯಿಲೆಗೆ ಕಾರಣವಾಗುತ್ತಿರುವುದು. ಕೃಷಿ ಕೆಲಸಗಳಲ್ಲಿ ಬಳಸುವ ರಾಸಾಯನಿಕ ಸಿಂಪಡಣೆ ಹಾಗೂ ಅತೀ ಹೆಚ್ಚು ಮಲೀನ ಎನ್ನಲಾಗುತ್ತಿದೆ. ಆದ್ದರಿಂದ ಜೇನುಹುಳುಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.